23/12/12

ಪುಟ್ಟಪ್ಪ ಎಂಬ ದೊಡ್ಡ ಬೆಟ್ಟ

ಕವಿಶೈಲದಲ್ಲಿ ಹೆಕ್ಕಿದ ಬೆಳಗಿನ ಬೆಟ್ಟದ ನೋಟ

ದೂರದೂರದ ಆಳದ ಕಣಿವೆಗಳಲ್ಲಿ ಟಿಸಿಲೊಡೆದು ಮಾರ್ದನಿಸುವ ನವಿಲುಗಳ ನಾಜೂಕು ದನಿ. ಪ್ರತಿ ಗಿಡಮರವನ್ನೂ ಬಳಸಿ-ಬಳಸಿ ಮೆತ್ತಗೆ ಮೈ ತಾಕುವ ಚುಂಬಕ ಗಾಳಿ. ನೇಸರನ ಉರಿಬಿಸಿಲನ್ನೂ ಸಹ್ಯಗೊಳಿಸುವ ಹಸುರು. ಹೆಪ್ಪುಗಟ್ಟಿದ ಮೌನದಲ್ಲೂ ಮೆಲುಗಾಳಿಗೆ ಮನಸೋತು ತಟಪಟನೆ ಸದ್ದು ಪಸರಿಸುವ ಬಿದಿರು...ಕವಿಶೈಲಕ್ಕೆ ಮನಸೋಲದಿರಲು ಇನ್ನೇನು ಬೇಕು. ನನಗೆ ಕುವೆಂಪುಗಿಂತಲೂ ಅವರನ್ನು ರೂಪಿಸಿದ, ಅವರೊಳಗೆ ಅನನ್ಯ ಆಲೋಚನೆಗಳನ್ನು ಬಿತ್ತಿದ ಪರಿಸರದ ಬಗ್ಗೆಯೇ ತೀರದ ಬೆರಗು. ಪುಟ್ಟಪ್ಪ ಎಂಬ ಮನುಷ್ಯನಲ್ಲಿ ಪದದ ಫಲವತ್ತತೆ ತುಂಬಿದ, ಹದವರಿತು ಬದುಕುವುದನ್ನು ಕಲಿಸಿದ ಮಲೆನಾಡನ್ನು, ಅದರ ರಮಣೀಯತೆಯನ್ನು ಮನಸಾರೆ ದಿಟ್ಟಿಸದೆ, ಅದಕ್ಕೆ ಮನಸೋಲದೆ ಅವರ ಸಾಹಿತ್ಯದ ಸೌದರ್ಯವನ್ನು ಸ್ವಾದಿಸುವುದು ಅಸಾಧ್ಯ.

ಕುವೆಂಪು ನನಗೆ ಮುಖ್ಯವೆನಿಸೋದು ಅವರ ಅಪಾರ ಸಾಹಿತ್ಯ ರಾಶಿಯಿಂದಲ್ಲ, ಬದುಕಿನಿಂದ. ಜೊತೆಗೆ ಅಷ್ಟೆಲ್ಲವನ್ನೂ ಬರೆಯದಿದ್ದರೆ ಅವರ ಬದುಕೇ ಅಪೂರ್ಣವಾಗುತ್ತಿತ್ತೇನೋ ಎಂಬಷ್ಟು ತೀವ್ರ ಸಂವೇದನೆಯನ್ನು ಒಳಗೊಂಡ ಅಭಿವ್ಯಕ್ತಿಯಿಂದ. ಏಕೆಂದರೆ ಅಭಿವ್ಯಕ್ತಿ ಮನುಷ್ಯನೊಳಗೆ ಜೀವಪರ ತುಡಿತಗಳನ್ನು ಜೀವಂತವಿಡುತ್ತದೆ. ಅದೆಷ್ಟೇ ಚಂದ ಬರೆದರೂ ತೃಪ್ತಿಯೆಂಬ ಕುಡಿಕೆಯ ತಳಭಾಗದಲ್ಲಿ ಅತೃಪ್ತಿಯ ಶಾಸ್ವತ ರಂಧ್ರವಿರಿಸುತ್ತದೆ. ಒಂದೊಂದು ಉತ್ತಮ ಬರಹವೂ ಮನುಷ್ಯಸಹಜ, ವಯೋಸಹಜ ಸಣ್ಣತನಗಳನ್ನು ನೀಗುತ್ತಾ ಬರುತ್ತದೆ. ಈ ಮಾತು ಇವತ್ತಿನ ಹಲವು ಬರಹಗಾರರಿಗೆ ಅನ್ವಯಿಸಲಾಗದು ಎಂಬುದು ವಿಪರ್ಯಾಸ.

ಬರಹ ಬಲ್ಲ ಎಲ್ಲರಿಗೂ ಒಂದು ಸತ್ಯ ಅರಿವಿಗೆ ಬಂದಿರುತ್ತದೆ. ಅದೇನೆಂದರೆ ಕನಸಲ್ಲದ ಲೋಕವೊಂದನ್ನು ಕಟ್ಟಿಕೊಡುವುದು ತುಂಬಾನೇ ಕಷ್ಟದ ಕೆಲಸ. ಅದೇ ಕನಸನ್ನು ಮನಸ್ಸಿಗೆ ತೋಚಿದಂತೆ ಕಡೆದು ನಿಲ್ಲಿಸಿಬಿಡಬಹುದು. ಹೆಚ್ಚೆಂದರೆ ಕನಸನ್ನು ಕಂಡಂತೆ ಕಟ್ಟಕೊಡಲಾಗಲಿಲ್ಲ ಎಂಬ ಕೊರಗು ಬರಹಗಾರನಲ್ಲಿ ಉಳೀಬಹುದು. ಆದರೆ ಕನಸಲ್ಲದ ಲೋಕ ತೆರೆದಿಡುವಾಗ ಸಾವಿರಾರು ಕಣ್ಣಗಳೂ ಆ ಲೋಕ ಕಂಡಿರುತ್ತವೆ ಎಂಬ ಎಚ್ಚರಿಕೆಯೂ ಕೆಲಸ ಮಾಡುವುದುಂಟು. ಕುವೆಂಪು ತನ್ನ ಬರಹದುದ್ದಕ್ಕೂ ಕಟ್ಟಿಕೊಟ್ಟ ಮಲೆನಾಡು ಕನಸಲ್ಲದ ಕಲಾಕೃತಿ. ಅವರ ಕಾದಂಬರಿಗಳು ಮಲೆನಾಡನ್ನು ಕಥಾಹಂದರದೊಳಕ್ಕೆ ತಂದುಕೊಂಡು ಮಾತನಾಡಿದರೆ, ಪ್ರಬಂಧಗಳು ನೇರವಾಗಿ ಅನುಭವಸಹಿತ ಮಾತನಾಡುತ್ತವೆ. ಆದರೆ ಕವಿತೆಗಳು ಮಲೆನಾಡನ್ನು ಮೀರಿ ಬೆಳೆದಂಥವು. ಮಲೆನಾಡಿನ ಹೆಜ್ಜೆಯಲ್ಲಿ ನಿಂತೂ ಅನಂತವನ್ನು ಜಪಿಸಿದಂಥವು. ಕಾವ್ಯವೆಂದರೆ ಅದೇ ತಾನೇ...

ಕುವೆಂಪು ಅಂದೊಡನೆಯೆ ಧುತ್ತೆಂದು ಕಾಡುವಂಥದ್ದು ಅವರ ಆಲೋಚನೆಯ ಎರಡು ತುದಿಗಳಾದ ಮಲೆನಾಡು ಮತ್ತು ವಿಶ್ವಮಾನವ ಸಂದೇಶ. ವ್ಯಕ್ತಿಯೊಬ್ಬ ತಾನು ತಾನಾಗಿಯೇ ಇದ್ದುಕೊಂಡೂ ಇನ್ನೇನೋ ಆಗುತ್ತಾನೆ ಎನ್ನುತ್ತಾರಲ್ಲ ಹಾಗೆ ಇದು. ಬಹುಶಃ ಕುವೆಂಪು ಬದುಕಿನ ಈ ಚಿಂತನೆಯೇ ನನ್ನನ್ನೂ ಸೇರಿಸಿ ಹಲವರಿಗೆ ಒಗಟಾಗಿ ಕಂಡಿರಬೇಕು. ರಾಜಾಶ್ರಯದ ಸಕಲ ಸೌಭಾಗ್ಯಗಳನ್ನು ಕಂಡಿದ್ದರೂ ಬನವಾಸಿಯಲ್ಲೇ ಹುಟ್ಟಬೇಕೆಂದು ಪಂಪ ಕನವರಿಸಿದ್ದು, ನೊಬೆಲ್ ಪುರಸ್ಕಾರ ಸಿಕ್ಕ ನಂತರವೂ ಎಳ್ಳಷ್ಟೂ ಕಡಿಮೆಯಾಗದ ರವೀಂದ್ರರ ಕೊಲ್ಕತ್ತಾ ವ್ಯಾಮೋಹ, ಚಿಲಿಯ ಸಂತ ನೆರೂಡಾ ಊರಿಂದ ದೂರ ಹೋಗಿ ಗುಡಿಸಲು ಕಟ್ಟಿಕೊಂಡು ಬದುಕಿದ್ದು, ರಷ್ಯಾದ ಪರಿಸರದ ಬಗೆಗೆ ಟಾಲ್'ಸ್ಟಾಯ್'ನ ನಂಬುಗೆ ಹಾಗೂ ಮ್ಯಾಕ್ಸಿಂಗಾರ್ಕಿಯ ತುದಿಮೊದಲಿರದ ಜೀವನಪ್ರೀತಿ...ಹೀಗೆ ಇಂತವೇ ಒಗಟುಗಳು ಸಾಕಷ್ಟಿವೆ. ಇಂತೆಲ್ಲಾ ಒಗಟುಗಳಿಗೆ ಅವರ ಬರಹಗಳೇ ಉತ್ತರ ಹೆಕ್ಕಿ ಕೊಡುತ್ತವೆ. ಕಾಲು ನಿಂತ ನೆಲದ ಧೂಳು ಅಂಟಿಸಿಕೊಂಡಿದ್ದರೂ ಭಾವ ವಿಶ್ವಮುಖಿಯಾಗಿರಬೇಕೆಂಬ ನಿಲುವು ಕುವೆಂಪು ಅವರದಾಗಿತ್ತು. ಇದನ್ನು ಒಂದೇ ಪದದಲ್ಲಿ ಹಿಡಿದು ಕೊಡುವುದಾದರೆ-'ಮಾನವೀಯತೆ'. ಪಂಪ ಇದನ್ನೇ 'ಮನುಜಕುಲ ತಾನೊಂದೆ ವಲಂ' ಎಂದಿದ್ದು.

ಕುವೆಂಪು ಅವರನ್ನು ನೋಡಿದರೆ ಎಲ್ಲರೂ ಸಾಮಾನ್ಯವಾಗಿ ಭಾವಿಸುವಂತೆ ಯಾರಿಗೂ ನಿಲುಕದಂತಹ ವ್ಯಕ್ತಿ ಅಂತ ನನಗನ್ನಿಸುವುದಿಲ್ಲ. ಸಾಮಾನ್ಯನನ್ನೂ ಮುಟ್ಟುವಂತಹ ಸರಳ ವ್ಯಕ್ತಿತ್ವವದು. ನಾನಂದುಕೊಂಡಂತೆ ಎತ್ತರದ ವ್ಯಕ್ತಿ ಅಂದ್ರೆ ಸುಲಭವಾಗಿ ಅರ್ಥವಾಗದ್ದಲ್ಲ, ಯಾರು ಬೇಕಾದರೂ ಅನುಸರಿಸಿ ನಡೆಯಬಲ್ಲದ್ದು. ಅಸಲಿಯಾಗಿ ಬದುಕಿನ ಸಾರ್ಥಕತೆ ಇರೋದು 'ನೋಡು, ನನ್ನಂತೆ ನೀನೂ ಬದುಕಬಹುದು' ಎಂದು ಪ್ರೇರೇಪಿಸುವುದರಲ್ಲಿ. ಮಲೆನಾಡಿನ ಸಾಮಾನ್ಯನೊಬ್ಬ ಕುವೆಂಪು ಯಾರೆಂದು ಗೊತ್ತಿಲ್ಲದೆಯೂ ಅವರಷ್ಟೇ ಜೀವನಪ್ರೀತಿಯಿಂದ ಬದುಕಬಲ್ಲ. ಆದ್ದರಿಂದಲೇ ಕುವೆಂಪು ಅವರದ್ದು ಅಸಾಧ್ಯ ಅನ್ನಿಸಿಬಿಡುವ ಬದುಕಲ್ಲ. ಏಕೆಂದರೆ ಅವರ ಬದುಕಿನ ಪರಿಧಿಯೊಳಗೆ ಮೊಂಡುತನಗಳಿಲ್ಲ. ಆದರೆ ನಮಗೆ ಲಂಕೇಶ್ ಇಲ್ಲವೇ ತೇಜಸ್ವಿಯವರ ಬದುಕು ಅಸಾಧ್ಯ ಅನ್ನಿಸೋದು ಸಹಜ. ರನ್ನನ ಕಾವ್ಯವನ್ನು ಪರೀಕ್ಷೆಗೊಳಪಡಿಸುವವರಿಗೆ ಮಾತ್ರವಲ್ಲ, ಲಂಕೇಶ್ ಅಥವಾ ತೇಜಸ್ವಿಯವರಂಥ ಸುಲಭಸಾಧ್ಯವಲ್ಲದ ಬದುಕನ್ನು ತನ್ನದಾಗಿಸಿಕೊಳ್ಳುವುದಕ್ಕೂ ಎಂಟೆದೆ ಬೇಕು.

ಜಗತ್ತಿನ ಜೀವವಿರುವುದು ಅದರ ಒಟ್ಟುಪ್ರಜ್ಞೆಯಲ್ಲೇ. ಪಕಳೆಗಳನ್ನಾಗಿಸಿ ಬಿಡಿಸುತ್ತಾ ಹೋದರೆ ಕಡೆಗೆ ಏನೂ ದಕ್ಕುವುದಿಲ್ಲ ಎಂಬುದಕ್ಕೆ ಕುವೆಂಪು ಒಟ್ಟು ಸಾಹಿತ್ಯವೇ ಒಂದು ಮಹೋಪಮೆ. ಪ್ರಕೃತಿ ಮತ್ತು ಮಾನವ ಸಮಾಜ ತಾನೇ ಸೃಷ್ಟಿಸಿಕೊಂಡ ವಾಸ್ತವಗಳ ನಡುವೆಯೂ ಕಟ್ಟಿಕೊಳ್ಳಬಹುದಾದ ಚಂದದ ಬದುಕಿನ ಒಳಗುಟ್ಟುಗಳನ್ನು ಅದು ಪಿಸುಗುಡುತ್ತದೆ. ಅಂಥದ್ದೊಂದು ಜೀವಪರ ಉಮೇದು ಅವರ ಬರಹಕ್ಕಿದೆ. ಆದರೆ ನಾವು ಹೆಚ್ಚು 'ನಾಗರಿಕ'ರಾದಂತೆಲ್ಲಾ ಅವರ ಬದುಕನ್ನೂ ಅವರನ್ನೂ ಬೇರ್ಪಡಿಸಲಾಗದಂತೆ ಬದುಕಿದ ಎಲ್ಲರನ್ನೂ ಮಹಾತ್ಮರ ಪಟ್ಟಿಗೆ ಸೇರಿಸಿದ್ದೇವೆ. ಅವರನ್ನೂ ಅವರ ಬದುಕನ್ನೂ ಬೇರೆಬೇರೆಯಾಗಿಸಿ ದೇವರುಗಳನ್ನಾಗಿಸಿದ್ದೇವೆ. ಹೆಚ್ಚೆಂದರೆ ಫೋಟೋಗೆ ಫ್ರೇಮ್ ಹಾಕಿಸಿಟ್ಟು ಜನುಮದಿನದಂದು ತೆಗೆದು ಧೂಳು ಒರೆಸಿ ಒಂದಷ್ಟು ಚಪ್ಪಾಳೆ ಹೊಡೆದು ನಿರುಮ್ಮಳರಾಗುತ್ತೇವೆ. ಜೊತೆಗೆ ಹೀಗೆ ಚಂದದ ಬದುಕು ಕಟ್ಟಿಕೊಂಡವರಿಗೆ ಅಥವಾ ಸಮಾಜದ ಒಳಿತಿಗಾಗಿ ತುಡಿದವರಿಗೆ ಅತಿಮಾನುಷ ಶಕ್ತಿಯಿತ್ತೆಂದು ಭಾವಿಸುವ ಮಹಾನುಭಾವರಿಗೇನೂ ಕೊರತೆಯಿಲ್ಲ. ಬುದ್ಧನಿಂದ ಬಸವನವರೆಗೆ, ಪಂಪನಿಂದ ಕುವೆಂಪುವರೆಗೆ ಮಹತ್ತನ್ನು ಸಾಧಿಸಿದ ಎಲ್ಲರಿಗೂ ಇದೇ ಸದ್ಗತಿಯೊದಗಿದೆ. ಇದು ಕೇವಲ ನಮ್ಮ ನಾಡಿಗೆ ಅಥವಾ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ನಮಗೆ ಗೊತ್ತಿರಬಹುದಾದ ಎಲ್ಲ ದೇಶ ಹಾಗೂ ಕಾಲಘಟ್ಟಗಳ ಅಪೂರ್ವ ಚಿಂತಕರದ್ದೂ ಇದೇ ಪಾಡು. ಸರಿ ಮುಂದೇನು ಎಂಬ ಕೇಳ್ವಿ ನಿಮ್ಮದಾದರೆ ಇದೋ ಅಡಿಗರ ಭರತವಾಕ್ಯ...

'ಅಂದು ರಸಋಷಿಗಳೊನಿಬರಬರೆದ ಕಾವ್ಯರಸ

ಸಿಂಧುವಿನೊಳಗೆ ಮಿಂದು ಮೆರುಗುಗೊಳಲಿ..

ಅಂದಿನವರಾಂತರ್ಯದೊಂದು ಶಾಂತಿಯ ಕಾಂತಿ

ಇಂದೆಮ್ಮ ಕೃತಿಗಳಲ್ಲಿ ಮಾರ್ಪೊಳೆಯಲಿ'

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ