30/11/12

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು..

ಒಂದೊಂದು ಬರಹ ಬರೆದು ಮುಗಿಸಿದಾಗಲೂ ನನ್ನೊಳಗಿನ ಸಾವಿಗೆ ನಾನು ಇನ್ನಷ್ಟು ಹತ್ತಿರನಾಗುತ್ತಿರುತ್ತೇನೆ. ಬರಹ ನಮ್ಮಿಬ್ಬರ ನಡುವಿನ ಅಂತರಕ್ಕೆ ಆತ್ಮೀಯತೆಯ ಸಮಪಾತಳಿ ಕಟ್ಟುತ್ತೆ, ನಾನು ಮೆಚ್ಚುಗೆ ಮತ್ತು ಪ್ರೀತಿಯಿಂದ ಅವೆರಡರತ್ತ ಕಣ್ಣು ಹೊರಳಿಸುತ್ತೇನೆ. ತುಟಿಯಂಚಲ್ಲಿ ನನಗಷ್ಟೇ ಕಾಣುವಂತೆ ನಗು ಇಣುಕುತ್ತೆ. ಇದು ಶುರುವಾಗಿದ್ದು, ಹಾಗೇನೇ ಮುಗಿಯೋದು ಎರಡೂ ಗೊತ್ತಿಲ್ಲ ನಂಗೆ.

9/11/12

ಮರುನೋಟದ ಒಂದು ಮುಖ...

ಇವತ್ತು ಆಫೀಸಿನಲ್ಲಿ ಥೇಟ್-ಬಿಆರ್.ಲಕ್ಷ್ಮಣರಾವ್ ಬರೆದ 'ಫೋಟೋಗ್ರಾಫರ್' ಕವಿತೆಯಲ್ಲಿದ್ದಂಥದ್ದೇ ಸಡಗರ...

ಹೊತ್ತು ಕಳೆಯಲೆಂದು ಹಿಂದೆಂದೋ ಕಂಡು, ಹಿಡಿಸಿದ್ದ 'ಔಟ್'ಲುಕ್ ಫೋಟೋಗ್ಯಾಲರಿ' ಹೊಕ್ಕೆ...

'2010ರ ಫೋಟೋ ಕಾಂಟೆಸ್ಟ್' ಮೇಲೆ ಕ್ಲಿಕ್ ಮಾಡಿದರೆ ಪರದೆಯಲ್ಲಿ ಬಿಚ್ಚಿಕೊಂಡ ನೋಟ ಇದು...

(2009ರ ಫೆಬ್ರವರಿ: ಮಡಗಾಸ್ಕರ್'ನಲ್ಲಿ ನಡೆದ ಗಲಭೆಯ ಹೊತ್ತು.  2010ರ ವರ್ಲ್ಡ್ ಪ್ರೆಸ್ ಫೋಟೋ ಕಾಂಟೆಸ್ಟ್'ನ  'ಸ್ಪಾಟ್ ನ್ಯೂಸ್ ಸ್ಟೋರೀಸ್' ವಿಭಾಗದಲ್ಲಿ ಮೊದಲ ಪ್ರಶಸ್ತಿ ಗಿಟ್ಟಿಸಿಕೊಂಡ ಫೊಟೋ-ಕ್ಲಿಕ್ಕಿಸಿದ್ದು ವಾಲ್ಟೇರ್)


...ಗಂಟಲು ಕಟ್ಟಿದಂತಾಯ್ತು
...ಮಿಡ್ಲಿಸ್ಕೂಲಿನಲ್ಲಿ ಓದಿಕೊಂಡಿದ್ದ ಮಿತಾಲಿ ಭಟ್ಟಾಚಾರ್ಜಿಯವರ ಹಿಂದಿ ಕವಿತೆಯ ಸಾಲುಗಳು ನೆನಪಾದವು.
..."ಎಲ್ಲಿಯವರೆಗೆ ಜನ ಹಸಿವಿನಿಂದ ನರಳುತ್ತಾರೋ ಅಲ್ಲಿಯವರೆಗೆ ನಾನು ಹೊಟ್ಟೆ ತುಂಬಾ ಊಟ ಮಾಡಲಾರೆ. ಎಲ್ಲಿಯವರೆಗೆ ಜನ ಅಳುವಿನಲ್ಲಿ ಕೈತೊಳೆಯುತ್ತಿರುತ್ತಾರೋ ಅಲ್ಲಿಯವರೆಗೆ ನಾ ಹೇಗೆ ನಗಲಿ...." ಹೀಗೇನೋ ಅಸ್ಪಷ್ಟವಾದ ನೆನಪು.

ಮನಸ್ಸಲ್ಲೇನೋ ಸಂದಿಗ್ಧ..
ಆದಷ್ಟು ಊಟ ಮಾಡಿ ಕೈ ತೊಳೆದುಕೊಂಡು ಬಂದೆ..
ಇಷ್ಟೊತ್ತಾದರೂ ಮನಸ್ಸಿನ್ನೂ ಮಡಗಾಸ್ಕರ್'ನಲ್ಲೇ ಇದೆ!

3/11/12

ಓಎಲ್'ಎನ್ ಹೇಳಿದ ಒಂದು ಗುಟ್ಟು...

ಪ್ರಿಯ ನಾಗರಾಜ್,
ನೋಡಿದೆ. ಚೆನ್ನಾಗಿದೆ ಅನ್ನುವುದು ಉಪಚಾರದ ಮಾತು. ಹೀಗೇ ಆಯಾ ಕ್ಷಣದ ಭಾವಗಳನ್ನೆಲ್ಲ ಹೇಳಿಕೊಳ್ಳುವುದು ಅಗತ್ಯವೇ? ಅದರಿಂದ ನೀವು ಬರೆಯಬಹುದಾದ ಉತ್ತಮ ಬರವಣಿಗೆಗೆ ತೊಡಕಾಗುವುದಿಲ್ಲವೇ? ಎಲ್ಲವನ್ನು ಹೇಳುವ ಆತುರಕ್ಕಿಂತ ಹೇಳಲೇಬೇಕಾದುದನ್ನು ಮಾತ್ರ ಹೇಳುವ ಸಾವಧಾನ ಒಳ್ಳೆಯದಲ್ಲವೇ?
* * * * *
 ಈ ಬ್ಲಾಗನ್ನು ಶುರುಮಾಡಿದಾಗ, "ಅಲಿಖಿತ' ಅನ್ನೋ ಒಂದು ಹೊಸ ಬ್ಲಾಗನ್ನು ಶುರುಮಾಡಿದ್ದೀನಿ..ನೋಡಿ ಹೇಗಿದೆ ಹೇಳಿ ಸರ್" ಅಂತ ಓ.ಎಲ್. ನಾಗಭೂಷಣಸ್ವಾಮಿ ಅವರಿಗೆ ಕೇಳಿದ್ದೆ. ಆಗ ಅತ್ತಲಿಂದ ಬಂದ ಮಾತಿದು. ಮೊದಮೊದಲಿಗೆ 'ಅಲಿಖಿತ'ದಲ್ಲಿ ನಾ ಬರೆದ ಬರಹಗಳೂ ಹಾಗಿದ್ದವು ಅನ್ನಿ. ಇನ್ನೂ ಎದೆಯೊಳಗೆ ಮಾಗಬೇಕಿದ್ದ, ಮತ್ತೇನೋ ಆಗಿ ನಂತರ ಹೊರಬರಬೇಕಿದ್ದ ಬರಹಗಳವು.
                                                                          * * * * *
"ನಮಸ್ತೆ ಸರ್..                 
ಖಂಡಿತ. ನನಗೂ ಆ ಅನುಮಾನ ಕಾಡಿದೆ. ಆದರೂ ಆ ಅನುಮಾನ ಕೇವಲ ಅನುಮಾನದ ಹಂತದಲ್ಲಿರುವ ಕಾರಣಕ್ಕೆ ಒಂದು ಪ್ರಯೋಗ ಅಂದುಕೊಂಡು ಇದನ್ನು ಶುರುಮಾಡಿದೆ. ನನ್ನ ಒಳ್ಳೆಯ ಬರವಣಿಗೆಯ ಸರಕನ್ನೂ ಇದು ಕದಿಯುತ್ತಿದೆ ಅನ್ನಿಸಿದ ದಿನವೇ 'ಅಲಿಖಿತ'ವನ್ನು ಬದಿಗೆ ಸರಿಸುತ್ತೇನೆ. ಆ ಕರಾರಿನ ಮೇರೆಗೇ ನನ್ನನ್ನು ನಾನು ಈ ಪ್ರಯೋಗಕ್ಕೆ ಒಪ್ಪಿಸಿಕೊಂಡಿದ್ದೇನೆ" ಅಂತ ಮಾತಾಡಿದ್ದೆ ಅವತ್ತು.
* * * * *
ಈ ಮಾತುಕಥೆಯಾಗಿ ಇಲ್ಲಿಗೆ ಸರಿಯಾಗಿ ಒಂದು ವರ್ಷ. ಆ ಕ್ಷಣ ಅನ್ನಿಸಿದ ಮಾತುಗಳನ್ನು ಎದೆಯೊಳಗಿಟ್ಟುಕೊಂಡು ಮಾಗಿದ ಭಾವ ಪಕಳೆಗಳನ್ನು ಮಾತ್ರ ಇಬ್ಬನಿಯಂಥ ಮನಸ್ಸುಗಳ ಓದಿನ ಸ್ಪರ್ಷಕ್ಕೆ ಒಪ್ಪಿಸುತ್ತಾ ಬರುತ್ತಿದ್ದೇನೆ. 'ಅಲಿಖಿತ' ತನ್ನ ಹೊಸ ರೂಪಿನಿಂದ ಹಲವರ ಮೆಚ್ಚುಗೆ ಗಳಿಸಿದೆ. ಹಲವು ವರ್ಷ ಕಾಡಿದ ನನ್ನ ನೋವಿಗೆ ಔಷಧಿ ಸಿಗುವಂತೆ ಮಾಡಿದೆ. ಆದರೂ ಓಎಲ್'ಎನ್ ಸರ್ ಹೇಳಿದ ಮಾತು ಮತ್ತು ಅದರ ಗುಟ್ಟನ್ನು ನಾನಿನ್ನೂ ಮರೆತಿಲ್ಲ. ಆ ಎಚ್ಚರದಲ್ಲೇ 'ಅಲಿಖಿತ'ಕ್ಕೆ ಜೀವ ತುಂಬುತ್ತಿದ್ದೇನೆ. ಫೇಸ್-ಬುಕ್'ನ ಅವಸರದ ಅಭಿವ್ಯಕ್ತಿಗೂ ನನ್ನ 'ಅಲಿಖಿತ'ದ ಬರಹಕ್ಕೂ ಇರುವ ತರತಮವನ್ನು ಕಂಡುಕೊಂಡಿದ್ದೇನೆ.



2/11/12

ಕನಿಷ್ಠ ಪ್ರೇಮಪತ್ರ ಬರೆಯಲಿಕ್ಕಾದರೂ...

ಎಲ್ಲರೂ ನೋಟ್ಸ್ ತೋರಿಸ್ತಾ ಹೋದ್ರು. ಮಾಮೂಲಿನಂತೆ ಲೆಕ್ಚರರ್ ಸೈನ್ ಹಾಕೋದು, ಗುಡ್-ಫೈನ್ ಅನ್ನೋದು ನಡೀತಾ ಇತ್ತು. ನನ್ನ ಸರದಿ ಬಂದಾಗ ನಾನೂ ನೋಟ್ಸ್ ಹಿಡಿದು ಅತ್ತ ನಡೆದೆ. ನನ್ನ ನೋಟ್ಸ್ ನೋಡಿದ ಲೆಕ್ಚರರ್  ಅದನ್ನು ಹಾಗೆ ನೋಡಿಕೊಳ್ಳುತ್ತಲೇ ಕ್ಲಾಸಿನ ಮಧ್ಯಭಾಗಕ್ಕೆ ಬಂದು ನಿಂತ್ರು. ಏನೋ ಗ್ರಹಚಾರ ಬಂತಲ್ಲಪ್ಪಾ ಅಂತ ಮನಸ್ಸಲ್ಲೇ ಉಗುಳು ನುಂಗಿದೆ. ಎಲ್ಲರತ್ತ ನನ್ನ ನೋಟ್ಸ್ ತೋರಿಸಿದ ಲೆಕ್ಚರರ್ ಅಂದಿದ್ರು....

'ನಾನೇನಾದ್ರೂ ಹುಡುಗಿಯಾಗಿದ್ದಿದ್ರೆ ನಾಗರಾಜ್-ಗೆ ಒಂದು ಲವ್ ಲೆಟರ್ ಬರೆದು ಕೊಟ್ಬಿಡ್ತಿದ್ದೆ...!'

ಕ್ಷಣದ ಹಿಂದೆ ನಿಶ್ಯಬ್ಧವಾಗಿದ್ದ ಕ್ಲಾಸಿನಲ್ಲಿ ನಮ್ಮೂರಿನ ಮಳೆಗಾಲದಲ್ಲಿ ದಿಢೀರನೆ ಬರುವ ದೊಡ್ಡಹಳ್ಳದಂತೆ ನಗುವಿನ ಅಲೆಗಳು ಶುರುವಾದ್ವು! ಹುಡುಗೀರೆಲ್ಲಾ ಬಾಯಿಗೆ ಅಡ್ಡ ಕೈಹಿಡಿದು ಅತ್ತ ಅಚ್ಚರಿ ಆಯ್ತು ಅನ್ನೋ ಥರಾ, ಇತ್ತ ನಾಚಿಕೆಯೂ ಆಯ್ತು ಅನ್ನೋ ಥರಾ ಮುಸಿಮುಸಿ ನಗ್ತಾ ಇದ್ರು. ಇನ್ನು ಹುಡುಗರ ನಗು ಕೇಳಬೇಕಾ...ಊಹೆ ಮಾಡ್ಕೊಳಿ......
* * * * *
ಅವರ ಹೆಸರು ಸೋಮಾನಾಯಕ್. ಪಿಯು'ನಲ್ಲಿ ನಮ್ಮ ಹಿಂದಿ ಲೆಕ್ಚರರ್. ನನ್ನ ಹಿಂದಿ ನೋಟ್ಸ್ ನೋಡಿ ಆ ಮಾತಾಡಿದ್ದು ಅವರು. ಹೌದು ನನ್ನೊಳಗಿನ ಹಲವು ಕಾಂಪಿಟೇಶನ್-ಗಳಲ್ಲಿ ಕನ್ನಡ ಮತ್ತು ಹಿಂದಿ ಕೈಬರಹದ್ದೂ ಒಂದು. ನಾನು ಹಿಂದಿಗಿಂತ ಕನ್ನಡವನ್ನೂ, ಕನ್ನಡಕ್ಕಿಂತ ಹಿಂದಿಯನ್ನೂ ಚಂದ ಬರೆಯಬಲ್ಲೆ. ಈಗಲೂ ಆ ಜಿದ್ದಾಜಿದ್ದಿ ನನ್ನೊಳಗೆ ಇದ್ದಿದ್ದೇ.

ಆದರೆ ಟೈಪಿಸುವುದನ್ನು ಕಲಿತ ಮೇಲೆ ಹೊಸ ಆತಂಕ ಶುರುವಾಗಿದೆ. ನನ್ನ ಕೈಬರಹವನ್ನು ನಾನೆಲ್ಲಿ ಕಳೆದುಕೊಳ್ತೀನೋ ಅನ್ನೋ ಭಯ ಕಾಡ್ತಾ ಇದೆ. ನನ್ನ ಕೈಬರಹವನ್ನು ನೋಡಿ ಅದೆಷ್ಟು ಮಂದಿ ಮೇಸ್ಟ್ರುಗಳು ಮೆಚ್ಚುಗೆ ಕೊಟ್ಟಿದ್ರು...ಅದೆಷ್ಟು ಮಂದಿ ಗೆಳೆಯ-ಗೆಳತಿಯರು ಸೂಪರ್ಬ್ ಅಂದಿದ್ರು...ಸೋಮಾನಾಯಕ್ ಸರ್  ಅಂತೂ ನೇರವಾಗಿ ಹೇಳಿದ್ರು. ಆದ್ರೆ ಅದೆಷ್ಟು ಮಂದಿ ಅಂತಹ ಮಾತನ್ನು ಹೇಳದೆ ಉಳಿಸಿಕೊಂಡರೋ ಅನ್ನೋ ಆಲೋಚನೆ ಬಂದಾಗ ನಗು ಬರುತ್ತೆ...

ಅದೇನೇ ಇರ್ಲಿ..ನನ್ನ ಸೊಗಸಾದ ಕೈಬರಹ ನೋಡಿ ಅದೆಷ್ಟು ಮಂದಿಗೆ ನನ್ನ ಮೇಲೆ ಪ್ರೀತಿಯಾಯ್ತು ಅನ್ನೋದು ಬೇರೆ ಮಾತು. ಆದರೆ ಈಗ ಉಳಿದಿರೋದು, ಮನದನ್ನೆಯಾಗಲಿರೋ ಹುಡುಗಿಗೆ ಕನಿಷ್ಠ ಒಂದು ಸೊಗಸಾದ ಪ್ರೇಮಪತ್ರ ಬರೆಯಲಿಕ್ಕಾದರೂ ನನ್ನ ಕೈಬರಹವನ್ನು ನಾನು ಕಾಪಿಡಬೇಕು! ಅದಕ್ಕಾಗಿ ಏನಾದ್ರೂ ಐಡಿಯಾ ಇದ್ರೆ ಹೇಳಿ ಮಾರಾಯ್ರೆ....