17/12/12

ಕಾಡುವ ಐದು ವರ್ಷದ ಅಧ್ಯಾಯ

ಚಿ.ಶ್ರೀನಿವಾಸರಾಜು
ಡಿಗ್ರಿಯಲ್ಲಿ ಓದುತ್ತಿದ್ದ ಮೊದಲ ವರ್ಷ. ವಿಜಯ ಕರ್ನಾಟಕದಲ್ಲಿ 'ಕನ್ನಡದ ಕಣ್ಮಣಿಗಳು' ಅಂತಲೇನೋ ಒಂದು ಬರಹ ಸರಣಿ ಶುರುವಾಗಿತ್ತು. ಅದರಲ್ಲೊಮ್ಮೆ ಚಿ.ಶ್ರೀನಿವಾಸರಾಜು ಅವ್ರ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಕಾಣಿಸಿಕೊಂಡಿತ್ತು. ಆ ಲೇಖನ ಬರುವ ಮುನ್ನವೇ ಚಿ.ಶ್ರೀನಿವಾಸರಾಜು ಹೊರಟುಹೋಗಿಬಿಟ್ಟಿದ್ರು. ನನಗಾಗಲೇ ಕ್ರೈಸ್ಟ್ ಕಾಲೇಜಿನ ಕವನ ಸ್ಪರ್ಧೆಯಲ್ಲಿ ನನ್ನ ಕವಿತೆ ಬಹುಮಾನ ಗಳಿಸಿದ ಸುದ್ದಿ ಸಿಕ್ಕಿತ್ತು. ಯುವ ಬರಹಗಾರರ ಬಗ್ಗೆ ಅಂಥದ್ದೊಂದು ಕನಸು ಇಟ್ಕೊಂಡಿದ್ದ ಮನುಷ್ಯನನ್ನು ನಾ ಮೊದಲ ಸಾರಿ ಇನ್ನೇನು ಭೇಟಿಯಾಗಬೇಕಿತ್ತು ಅನ್ನುವಷ್ಟರಲ್ಲೇ ಅವರು ಡಿಸೆಂಬರ್ ಕಡೇ ವಾರದಲ್ಲಿ ಇಲ್ಲವಾಗಿದ್ದರು. ಲೇಖನ ಓದಿ ಮುಗಿಸಿದಾಗ ಕಣ್ಣಂಚು ಒದ್ದೆಯಾಗಿತ್ತು.
* * * * *
ಇಷ್ಟೊತ್ತಿಗೆ ನನ್ನ ಬೊಗಸೆಯಲ್ಲಿ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದಿಂದ ಬಂದಿರುತ್ತಿದ್ದ ಪತ್ರ ಇರುತ್ತಿತ್ತು. ಅದರಲ್ಲಿ ನನ್ನ ಕವಿತೆಯೋ ಕಥೆಯೋ ಪ್ರಶಸ್ತಿಗೆ ನಿಕ್ಕಿಯಾಗಿರುತ್ತಿತ್ತು. ನಾನದನ್ನು ಮೊದಲ ಬಾರಿಗೆ ರೆಕ್ಕೆ ಬಿಚ್ಚಿದ ನವಿಲನ್ನು ಕಂಡ ಮಗುವಿನಂತೆ ಕಣ್ಣರಳಿಸುತ್ತಾ, ತಡವಿ ನೋಡುತ್ತಾ, ನನ್ನದೇ ಹೆಸರಿನ ಒಂದೊಂದೇ ಅಕ್ಷರಗಳನ್ನು ಮೆತ್ತಗೆ ಓದುತ್ತಾ ಆನಂದಿಸುತ್ತಲಿರುತ್ತಿದ್ದೆ.

ಕಳೆದ ಐದು ವರ್ಷಗಳಿಂದಲೂ ಡಿಸೆಂಬರ್'ನಲ್ಲಿ ಈ ಮನಸ್ಥಿತಿ ನನ್ನೊಳಗೆ ಸೆರೆಹೊಡೆದಿರುತ್ತಿತ್ತು. ವರ್ಷವಿಡೀ ಮನಸ್ಸಿಗೆ ಎಷ್ಟೇ ವೇದನೆಯಾಗಿದ್ದರೂ, ಎಂಥದ್ದೇ ಸಂಕಷ್ಟಗಳನ್ನು ಎದುರಿಸಿದ್ದರೂ ಡಿಸೆಂಬರ್ ಬಂತೆಂದರೆ ಅದೆಲ್ಲವೂ ಮಂಗಮಾಯ. ಜನವರಿಯಲ್ಲಿ ನಡೆಯಲಿರೋ ಪ್ರಶಸ್ತಿ ಪ್ರದಾನ ಸಮಾರಂಭದ ಕನಸು ಕಾಣುತ್ತಾ ಕಾಲ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ನನ್ನ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಜೀವನದ ಐದೂ ವರ್ಷ ನಾನೀ ಅನನ್ಯ ಖುಷಿಯನ್ನು ಅನುಭವಿಸಿದ್ದೆ. ಅತ್ತಲಿಂದ ನನ್ನ ಕವಿತೆಯೂ, ಕಥೆಯೂ ಇರುತ್ತಿದ್ದ ಬಹುಮಾನಿತ ಪುಸ್ತಕವನ್ನು ನನ್ ಮೇಸ್ಟ್ರುಗಳಿಗೆ, ನಮ್ ಪಟಾಲಂನ ಹಿರಿ-ಕಿರಿಯ ಗೆಳೆಯರಿಗೆ ಹೆಮ್ಮೆಯಿಂದ ಹಂಚುತ್ತಿದ್ದೆ.
* * * * *
ಆದರೆ ಈ ವರ್ಷ ಅಂಥದ್ದೊಂದು ಖುಷಿಗೆ ನಾ ಒಳಗಾಗಿಲ್ಲ. ಏಕೆಂದರೆ ಕ್ರೈಸ್ಟ್ ಕನ್ನಡ ಸಂಘದ ಸ್ಪರ್ಧೆಗಳೇನಿದ್ರೂ ವಿದ್ಯಾರ್ಥಿಗಳಿಗೆ ಮಾತ್ರ. ನಾನೀಗ ವಿದ್ಯಾರ್ಥಿಯಲ್ಲ. ಕಳೆದ ಐದೂ ವರ್ಷ ಕನ್ನಡ ಸಂಘದಿಂದ ಬಂದ ಫಲಿತಾಂಶದ ಪತ್ರಗಳು, ನಾ ಬಹುಮಾನ ಪಡೆಯುವಾಗ ಯಾರೋ ಕ್ಲಿಕ್ಕಿಸಿದ ಫೋಟೋಗಳು, ಪುಸ್ತಕದ ಅಪ್ಪುಗೆಯೊಳಗೆ ಬಂಧಿಯಾದ ನನ್ನ ಕವಿತೆ-ಕಥೆಗಳು ಎಲ್ಲವನ್ನೂ ಹರವಿಕೊಂಡು ಕುಂತಿದ್ದೇನೆ. ಬದುಕಿನ ಮಹತ್ವದ ಅಧ್ಯಾಯವೊಂದು ಮುಕ್ತಾಯ ಕಂಡಂತೆ ಭಾಸವಾಗಿ, ಕಣ್ಣಂಚಲ್ಲಿ ತೇವ ಪಸರಿಸಿ ಎಲ್ಲವೂ ಮಂಜು-ಮಂಜು....



2 ಕಾಮೆಂಟ್‌ಗಳು: