22/6/14

ಮಾಗಬೇಕಾದ ಪತ್ರಕರ್ತರು ಓದಬೇಕಾದ ಬರಹಗುಚ್ಛ

('ವಿಜಯ ಕರ್ನಾಟಕ'ದ ಸಂಪಾದಕರಾಗಿದ್ದ ಈ ರಾಘವನ್ ಕುರಿತ ನೆನಪುಗಳ ಮಿಡಿತ 'ಸಂಪಾದಕರ ಸಂಪಾದಕ' ಪುಸ್ತಕದ ಬಗೆಗೆ ನನ್ನೊಳಗೆ ಬೆಳೆದ ನಾಕು ಮಾತು)

ಪತ್ರಿಕೆ, ಪತ್ರಿಕೆಗಿಂತಲೂ ದೊಡ್ಡದಾದ ಪತ್ರಿಕಾವೃತ್ತಿ ಪತ್ರಕರ್ತರಿಂದ ನಿಜವಾಗಿಯೂ ಏನನ್ನು ಬಯಸುತ್ತದೆಂದು ತಿಳಿಯಬೇಕೆಂಬ ಅಸಲಿ ಹಂಬಲ ಇರುವ ಎಳೆಯ ಪತ್ರಕರ್ತರು, ಮಾಧ್ಯಮ ವಿದ್ಯಾರ್ಥಿಗಳು ಒಮ್ಮೆ ಎಲ್ಲ ಸಾಲುಗಳ ಮೇಲೂ ಕಣ್ಣಾಡಿಸಬೇಕಾದ ಬರಹಗುಚ್ಛವಿದು. ಹೇಳಲಿಕ್ಕೆ ಮಾತ್ರ ಅವರವರ ವೈಯಕ್ತಿಕ ಅನಿಸಿದರೂ, ಓದುವಾಗ ಕಥೆ ಹೇಳುತ್ತಿರುವ ವ್ಯಕ್ತಿ ಮತ್ತು ಆತ ಹೇಳುತ್ತಿರುವ ಆತನದ್ದಷ್ಟೇ ಆದ ಖಾಸಗಿ ಅನುಭವ ಎಂಬ ನಮ್ಮ ಗೊತ್ತಿರುವಿಕೆ ಗೌಣವಾಗುವುದು ಇಲ್ಲಿನ ಬರಹಗಳ ಕಸುವು.

ಈ ಪಠ್ಯಗಳ ಕುರಿತು ಪರೀಕ್ಷೆ ನಡೆಸುವಂಥ ಅಸಂಬದ್ಧ ಕೆಲಸ ಕೈಬಿಡುವ ಷರತ್ತಿನೊಂದಿಗೆ ಇಂಥ ಅನೌಪಚಾರಿಕ ಪುಸ್ತಕಗಳನ್ನು ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಮಾಡುವುದು ಮಾಧ್ಯಮದ ಸಾಚಾತನದ ಭವಿಷ್ಯದ ದೃಷ್ಟಿಯಿಂದ ತುಂಬಾನೇ ಒಳಿತು. ಹಾಗೆ ಮಾಡಿದ್ದೇ ಆದರೆ, ಸಿಲೆಬಸ್ ಹೆಸರಿನಲ್ಲಿ ಒಣ ವಾಕ್ಯಗಳನ್ನು, ಸವಕಲು ಗ್ರಹಿಕೆಗಳನ್ನು ಇಟ್ಟುಕೊಂಡು ಯಾವತ್ತೋ ಬರೆದ ಬರಹಗಳನ್ನು ಕೂಡಿಸಿಕೊಂಡು ಪುಸ್ತಕೋದ್ಯಮ ನಡೆಸುವ ಅಕಾಡೆಮಿಕ್ ಬರಹಗಾರಿಗೆ ಹಾಗೂ ಅಂಥವುಗಳನ್ನೇ ಸರ್ವಶ್ರೇಷ್ಠ ಕೃತಿ ಎಂದುಕೊಂಡು ಏನೂ ಇಲ್ಲದಿದ್ದರೂ ಗಂಟೆಗಟ್ಟಲೆ ಪಿಟೀಲು ಕುಯ್ಯುವ ಪತ್ರಿಕೋದ್ಯಮ ಮೇಷ್ಟ್ರುಗಳಿಗೆ ಒಂಚೂರು ರೆಸ್ಟು ಕೊಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಮಾಧ್ಯಮ ಕ್ಷೇತ್ರದ ಹದಗೆಟ್ಟ ವಾಸನೆಯನ್ನೇ ಅಸಲಿ ಎಂದು ಗ್ರಹಿಸಿ ತಾವೂ ಅಂಥದ್ದೇ ಮನಸ್ಥಿತಿ ರೂಪಿಸಿಕೊಳ್ಳುತ್ತಿರುವ ಬಹುತೇಕ ವಿದ್ಯಾರ್ಥಿಗಳಲ್ಲಿ ತುಂಬು ಜೀವಂತಿಕೆ ಹಾಗೂ ವೃತ್ತಿಧರ್ಮದ ಅಸಲಿ ಫಸಲಿಗೆ ಚಂದದ ತಳಪಾಯ ಹಾಕಬಹುದು.

ಆದರೂ ಪುಸ್ತಕ ಪರಿಪೂರ್ಣವಾಗಿಲ್ಲ ಎಂಬುದು ಒಳ್ಳೆಯ ಪುಸ್ತಕದ ಲಕ್ಷಣಗಳಲ್ಲೊಂದು. ಬಹುತೇಕರು ಈ ಪುಸ್ತಕದಲ್ಲಿ ಬರೆಯುವ ಅವಕಾಶವನ್ನು ರಾಘವನ್ ತಮಗೆ ಉಪಕರಿಸಿದ್ದನ್ನು ಸ್ಮರಿಸುವ ವೇದಿಕೆಯನ್ನಾಗಿಯೂ ಮಾಡಿಕೊಳ್ಳದೆ ಇದ್ದಿದ್ದರೆ ಎಲ್ಲರೂ ರಾಘವನ್ ಬಗ್ಗೆ ಒಂದೇ ಥರದ ಮಾತುಗಳನ್ನು ಆದರೆ ಬೇರೆ ಬೇರೆ ಪದ, ವಾಕ್ಯಗಳಲ್ಲಿ ಕಟ್ಟಿಕೊಟ್ಟಿರುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ; ಇದು ಇಲ್ಲಿನ ಬರಹಗಳ ಸ್ವಾರಸ್ಯ. ಅಲ್ಲಲ್ಲಿ ಭಾವಾತಿರೇಕದಿಂದಲೋ ಏನೋ ರಾಘವನ್'ಗೆ ಪದೇಪದೆ ಸಲಾಮು ಹೊಡೆಯುವುದು, ಕೃತಜ್ಞತೆ ಅರ್ಪಿಸುವುದು, ಹೊಗಳುಭಟ್ಟರನ್ನು ಕಂಡರೆ ರಾಘವನ್'ಗೆ ಆಗುತ್ತಿರಲಿಲ್ಲ ಎಂದು ಉಲ್ಲೇಖಿಸುತ್ತಲೇ ಬಿಡುವಿಲ್ಲದಂತೆ ಹೊಗಳುವುದು ನಡೆದಿದೆ. ರಾಘವನ್'ರಂಥ ತೂಕದ ಮನುಷ್ಯನ ಬಗ್ಗೆ ಅವರು ಇಲ್ಲದಿದ್ದಾಗ ಮಾತನಾಡುವಾಗಲೂ ಸಮಚಿತ್ತ ರೂಢಿಸಿಕೊಂಡಿದ್ದಿದ್ದರೆ ಬರಹಗಳು ಇನ್ನಷ್ಟು ಗಾಂಭೀರ್ಯದ ಜೊತೆಗೆ ಸಹಜ ಸೌಂದರ್ಯ ಧರಿಸುತ್ತಿದ್ದವು; ಸ್ವಲ್ಪ ಮೂಢನಂಬಿಕೆಯತ್ತ ವಾಲಿ ಹೇಳುವುದಾದರೆ, ಇಲ್ಲಿಲ್ಲದ ರಾಘವನ್'ಗೂ ಬಹುಶಃ ಇಷ್ಟವಾಗುತ್ತಿದ್ದವು! ಇನ್ನು, 'ನಮ್ಮ ಮಾತು' ಪುಟದಿಂದಲೇ ಶುರುವಾಗುವ ವಾಕ್ಯರಚನೆಯಲ್ಲಿನ ಸಣ್ಣಪುಟ್ಟ ದೋಷಗಳು, ಅಲ್ಲಿಲ್ಲಿ ತಲೆ ಎತ್ತುವ ಅಕ್ಷರ ಅಪಸ್ವರಗಳನ್ನು ದೂರ ಇಟ್ಟಿದ್ದರೆ, ಇಲ್ಲಿ ಬರೆದವರೆಲ್ಲರೂ ಪತ್ರಕರ್ತರು ಎಂಬ ನಿಜದ ಘನತೆ ಹೆಚ್ಚುತ್ತಿತ್ತು.

ವಿದ್ಯಾರ್ಥಿಜೀವನ ಮುಗಿಸಿ ಬೆಂಗಳೂರಿಗೆ ಕಾಲಿಟ್ಟ ನಂತರ ಎಲ್ಲ ಪುಟಗಳನ್ನೂ ಓದಿಸಿಕೊಂಡ ಮೊದಲ ಪುಸ್ತಕವಿದು. ಸಾಮಾನ್ಯವಾಗಿ ಇಂಥ ವ್ಯಕ್ತಿಚಿತ್ರದ ಪುಸ್ತಕಗಳಿಂದ (ಬರೆಯಿಸಿಕೊಂಡವರು ಬದುಕಿದ್ದರೂ, ಬದುಕಿರದಿದ್ದರೂ) ಅಂತರ ಕಾಯ್ದುಕೊಂಡವನು ನಾನು. ಆದರೆ ಈ ಪುಸ್ತಕವನ್ನು ಹಲವು ಕುತೂಹಲಗಳ ಒತ್ತಡಕ್ಕೆ ಮಣಿದು ಪ್ರೀತಿಯಿಂದ ಓದಿದ್ದಾಯಿತು. ಇಂಥದ್ದೊಂದು ಪುಸ್ತಕವನ್ನು ನಮ್ಮಂಥ ಎಳೆಯ ಪತ್ರಕರ್ತರಿಗೆ ಎಟುಕಿಸಿದ್ದಕ್ಕೆ ಧನ್ಯವಾದ. ರಾಘವನ್'ರೊಂದಿಗಿನ ಹೃದಯದ ನೆನಪುಗಳನ್ನು ಹೆಕ್ಕಿಕೊಟ್ಟ ಎಲ್ಲರಿಗೂ ಅಭಿನಂದನೆ.

10/5/14

ಅಡಿಗರು, ಮೇಸ್ಟ್ರು ಮತ್ತು ಸ್ವಪ್ರತಿಷ್ಠೆ

ಸಹ್ಯಾದ್ರಿ ಕಾಲೇಜು ಕ್ಯಾಂಪಸ್'ನ ಮರಗಳು ಆಗಷ್ಟೆ ಎಲೆಯುದುರಿಸಿ, ನಮಗೂ-ಬೇಸಿಗೆಗೂ ಸಂಬಂಧವಿಲ್ಲ ನೋಡ್ರಪ್ಪಾ ಎಂಬಂತೆ ತಲೆಯೆತ್ತಿ ನಿಂತಿದ್ದವು. ಅಂತಿಮ ವರ್ಷದ ಡಿಗ್ರಿಯ ಮಧ್ಯಾಹ್ನದ ತರಗತಿ ಆಗಷ್ಟೆ ಶುರುವಾಗಿತ್ತು. ತೀನಂಶ್ರೀಯವರ 'ಭಾರತೀಯ ಕಾವ್ಯಮೀಮಾಂಸೆ'ಯ ತರಗತಿಯದು. ನಮಗೆ ಗೊತ್ತಿದ್ದ ಕನ್ನಡದ ಪದ್ಯಗಳಿಗೆ ಅಲ್ಲಿದ್ದ ಮಾತುಗಳನ್ನು ಹೇಗೆ ಅನ್ವಯಿಸಬೇಕೆಂದು ಗೊತ್ತಾಗದೆ ಬೇಸತ್ತಿದ್ದೆವು. ಆದ್ರೆ ಯೂನಿವರ್ಸಿಟಿಯ ಮೂರ್ಖರಿಗೆಲ್ಲ ಆ ಪಠ್ಯವೇ ಭಕ್ಷ್ಯಭೋಜನ ಎಂಬಂತಾಗಿತ್ತು. ಈ ಎರಡೂ ತುದಿಯ ಮಧ್ಯೆ ಸಿಲುಕಿದ್ದ ಬಡಪಾಯಿಗಳೆಂದರೆ ಉಪನ್ಯಾಸಕರು. ಅವರು ನೆಟ್ಟಗೆ (ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ) ಪಾಠ ಮಾಡಬೇಕೆಂದರೆ ಆ ಪಠ್ಯದಲ್ಲಿದ್ದ ಸಂಗತಿಗಳಿಗೆ ಕನ್ನಡ ಪದ್ಯಗಳ ಉದಾಹರಣೆ ಕೊಡಬೇಕಿತ್ತು. ಆದರೆ ಹಾಗೆ ಉದಾಹರಣೆ ಕೊಡುವಲ್ಲಿ ಸೋಲುತ್ತಿದ್ದ ಅವರು, ಸಂಸ್ಕೃತದ ಕಾವ್ಯದಿಂದಲೇ ಉದಾಹರಣೆ ಹೆಕ್ಕುತ್ತಿದ್ದರು, ಅದರಲ್ಲೂ ಬಹುಪಾಲು ಉದಾಹರಣೆಗಳು ಅವರು ಕಷ್ಟಪಟ್ಟು, ಆಲೋಚನೆ ಮಾಡಿ ಹುಡುಕಿ ತಂದ ಉದಾಹರಣೆಗಳಂತೂ ಖಂಡಿತ ಆಗಿರುತ್ತಿರಲಿಲ್ಲ. ಹಾಗಾಗಿಯೇ ಕಾವ್ಯಮೀಮಾಂಸೆಯ ತರಗತಿಗಳಲ್ಲಿ ಕನ್ನಡ ಪದ್ಯ ಬರೆದವರು ಕಾಣಿಸಿಕೊಳ್ಳಲು ಪುಣ್ಯ ಮಾಡಿರಬೇಕಿತ್ತೋ ಏನೋ! ಹೀಗಿರುವಾಗ ಆ ದಿನದ ತರಗತಿಯಲ್ಲಿ ದಿಢೀರನೆ ಗೋಪಾಲಕೃಷ್ಣ ಅಡಿಗರು ಕಾಣಿಸಿಕೊಂಡಿದ್ದು ನನಗೆ ಶುರುವಿಗೆ ಪರಮಾಶ್ಚರ್ಯಕ್ಕೆ ಕಾರಣವಾಗಿತ್ತು.

ಪಾಠ ಹೇಳುತ್ತಿದ್ದ ಉಪನ್ಯಾಸಕಿ ಹೇಳತೊಡಗಿದ್ದರು, "ನೀವು ಅಡಿಗರ ಕವಿತೆಗಳನ್ನು ನೋಡಿ ಬೇಕಾದರೆ... ಎಲ್ರಿಗೂ ಅರ್ಥ ಆಗೋ ಹಾಗಿವೆಯಾ ಅವು? ಕೇವಲ ಪಂಡಿತರಿಗಷ್ಟೆ ಅರ್ಥ ಆಗೋವಂಥವು. ಪ್ರತಿಷ್ಠೆಗಾಗಿ ಕಾವ್ಯ ಬರೆದರೆ ಎಲ್ಲರನ್ನೂ ತಲುಪೋಕೆ ಸಾಧ್ಯವಿಲ್ಲ. ಅಡಿಗರ ಪದ್ಯಗಳಲ್ಲಿ ಪದಗಳ ದೊಂಬರಾಟವಷ್ಟೆ ಇದೆ. ಹಾಗಾಗಿ ಅಡಿಗರೂ ಸ್ವಪ್ರತಿಷ್ಠೆಗಾಗಿ ಪದ್ಯ ಬರೆದ್ರು ಅಂತ ಹೇಳಬಹುದು...'' ಆಯಮ್ಮ ಕಡೇ ಮಾತು ಮುಗಿಸೋದ್ರೋಳಗೆ ನನಗೆ ಸಿಟ್ಟು ನೆತ್ತಿಗೇರಿತ್ತು. ಭರದಿಂದ ಎದ್ದುನಿಂತು ಒಂದು ಕೇಳ್ವಿ ಒಗೆದೆ, "ಮೇಡಮ್, ಅಡಿಗರು ಸ್ವಪ್ರತಿಷ್ಠೆಗೋಸ್ಕರ ಪದ್ಯ ಕಟ್ಟಿದ್ರು ಅಂತ ಹೇಳಿದ್ರಿ. ಹಾಗಾದ್ರೆ ವಿಭಿನ್ನವಾಗಿ ಬರೆಯೋದು, ಹೊಸ ನುಡಿಗಟ್ಟುಗಳನ್ನು ಹುಟ್ಟುಹಾಕೋದು, ತನಗೆ ಸರಿ ಅನ್ನಿಸಿದ ದಾರಿಯೊಂದನ್ನು ಸೃಷ್ಟಿಸುವುದು ಸ್ವಪ್ರತಿಷ್ಠೆಯಾ? ಅದು ಸ್ವಪ್ರತಿಷ್ಠೆ ಅನ್ನೋದಾದ್ರೆ ಹೊಸತನ್ನು ಪ್ರತಿಪಾದಿಸಿದ ಎಲ್ರನ್ನೂ ನಾವು ಹಾಗೆ ಕರೀಬಹುದಲ್ಲ?!" ಆಯಮ್ಮ ನಗುವಲ್ಲದ ನಗುವ ನಗುತ್ತಾ ಮನಸ್ಸಿಗೆ ಬಂದಂತೆ ಸಮರ್ಥಿಸಿಕೊಂಡದ್ದಾಯ್ತು. ನಾನದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬಂತೆ ಅಡ್ಡಡ್ಡ ತಲೆಯಾಡಿಸಿ ಕುಂತದ್ದೂ ಆಯ್ತು.

ಆಯಮ್ಮನ ಅಡ್ಡಾದಿಡ್ಡಿ ಮಾತುಗಳನ್ನು ಕೇಳಿ ಶುರುವಿಗೆ ಸಿಡಿದ ಸಿಟ್ಟು ಆಮೇಲೆ ವ್ಯಂಗ್ಯದ ನಗುವಾಗಿ ಬಾಗಿ, ಅಡಿಗರ ಈ ಸುಲಲಿತ ಸಾಲುಗಳು ತಲೆಯಲ್ಲಿ ಗುಂಯ್'ಗುಡತೊಡಗಿದವು...
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
ಕರಗೀತು ಮುಗಿಲ ಬಳಗ
ಬಂದೀತು ಸುಧೆಯ ಮಳೆ, ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗ...

ಆಮೇಲೊಂದಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರೆದುರಿಗೆ ಆಯಮ್ಮನ ಮಾತನ್ನು ತಂದೆ, ಜರಿದೆ, ಇಂಥ ಕಾಲೇಜಿನಲ್ಲಿ ಇಂಥ ಮೇಸ್ಟ್ರುಗಳಿದ್ದಾರಲ್ಲ ಅಂತ ನಾಚಿಕೆಯಾಗ್ತಿದೆ ಎಂದೆ. ಆಕೆ ಮುನಿಸಿಕೊಂಡು ಸಮಾರಂಭದ ಊಟ ಬಿಟ್ಟರು. ಆಯಮ್ಮನ ಪಾಲನ್ನೂ ನಾನೇ ತಿಂತೇನೆ ಬಿಡ್ರೋ ಅಂತ ಸಹಪಾಠಿಗಳಿಗೆ ಸಮಾಧಾನಿಸಿದೆ. ಅಡಿಗರ ಪದ್ಯದ ಸಾಲುಗಳು ತಲೆಯಲ್ಲಿ ಮಿಂಚಿ ಸಣ್ಣಗೆ ನಗು ಹೊರಳಿತು ಮೊಗದಲ್ಲಿ...

ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ,
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
ಕೊಟ್ಟೆವಿದೋ ವೀಳೆಯವನು;
ನಿಮ್ಮಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವು ನಾವು ಹೊಸ ನಾಡೊಂದನು,
ಸುಖದ ಬೀಡೊಂದನು!
** ** ** **
ಅಲ್ಲಿಗೆ ಸರಿಯಾಗಿ ಎರಡು ವರ್ಷದ ಹಿಂದೆ ಅಡಿಗರು ಅಂದ್ರೆ ಮೂಗು ಮುರಿಯುತ್ತಿದ್ದ ನಾನು, ಅದೇ ಅಡಿಗರ ಬಗೆಗಿನ ಮಾತೊಂದರ ಕಾರಣಕ್ಕೆ ಆ ಉಪನ್ಯಾಸಕಿಯೊಂದಿಗೆ ವೈಮನಸ್ಯ ಕಟ್ಟಿಕೊಳ್ಳುವಂತಾಗಿದ್ದು ದೊಡ್ಡ ಮ್ಯಾಜಿಕ್. ಆ ಮ್ಯಾಜಿಕ್ ಮಾಡಿದವರು ಕಿರಂ ನಾಗರಾಜ್...

ಆದರೂ ನೀ ದಗಾಖೋರ, ನಾ ಬಲ್ಲೆ; ಹಳ್ಳಿಶಾಲೆ
ಮೇಷ್ಟರಿಲ್ಲದ ವೇಳೆ ತಾಳ ಹಿಡಿದು
ನೀ ಭಾಗವತ ಭಾರಿಸಿದೆ; ನಾನು ಬಲಭೀಮ
ರೌದ್ರಾವತಾರಕ್ಕೆ ರೂಲುದೊಣ್ಣೆ&
ಗದೆ ಹಿಡಿದು ತಿರುವಿ ಹೂಂಕರಿಸಿದ್ದೆ; ಇಪ್ಪತ್ತೈದು
ಕಮ್ಮುಚಟ್ಟುಗಳು ಮುಗಿವಷ್ಟರೊಳಗೆ
ಹೂಜೆ ಬರಿಹೋಳು; ತರಗತಿಯ ಭೋರ್ನಗೆ ಹುಯಿಲು;
ಬೆನ್ನ ಬಾಸುಂಡೆಯೋ ಮಾಯದ ಕಥೆ

......ಕಿರಂ ತಮ್ಮ ಬಲಗೈನ ಬೆರಳುಗಳನ್ನು ಮೆದುವಾಗಿ ಒಂದರ ಹಿಂದೊಂದು ಮತ್ತೆ ಮತ್ತೆ ಸರಿಯುವಂತೆ ಮಾಡುತ್ತಾ ಅಡಿಗರ 'ಕೂಪಮಂಡೂಕ' ಪದ್ಯದ ಸಾಲುಗಳನ್ನು ಕೇಳಿಸುತ್ತಾ, ಅದರ ಬಗ್ಗೆ ಅವರದೇ ಅದೊಂಥರದ ಧ್ಯಾನದಲ್ಲಿ ಮಾತಾಡ್ತಾ ಇದ್ರೆ... ಆಹ್... ಈವಯ್ಯನ ಬಾಯಲ್ಲಿ ಪದ್ಯ ಓದಿಸ್ಕೊಳ್ಳೋಕೂ ಪುಣ್ಯ ಮಾಡಿರ್ಬೇಕು ಬಿಡು ಕವಿಯಾದೋರು ಅನ್ನಿಸಿಬಿಟ್ಟಿತ್ತು! ನೀನಾಸಂನ ಶಿಬಿರವೊಂದರಲ್ಲಿ ಹಾಗೊಮ್ಮೆ ಎದುರಾಗಿದ್ದ ಅಡಿಗರ ಪದ್ಯಗಳು ಥಟ್ಟನೆ ಆಪ್ತ ಅನ್ನಿಸಿದ್ದು ಕಿರಂ ಆ ಪದ್ಯಗಳನ್ನು ಕೇಳಿಸಿದ ಮೇಲಷ್ಟೆ. ಡಿಗ್ರಿಗೆ ಬರುವತನಕವೂ ನಮ್ಮ ಕನ್ನಡ ಮೇಸ್ಟ್ರುಗಳು (ಈ ಪದಬಳಕೆಗೆ ಅವರು ಯೋಗ್ಯರಲ್ಲ ಅನಿಸಿದರೂ ಬಳಸ್ತಿದ್ದೇನೆ...) ಅಡಿಗರ ಪದ್ಯಗಳನ್ನು ಬೇರಾವುದೋ ಲೋಕದ ಬಗ್ಗೆ ಕಟ್ಟಿರುವಂಥದ್ದು, ಜಪ್ಪಯ್ಯ ಅಂದ್ರೂ ನಮಗಾರಿಗೂ ಅರ್ಥವಾಗದ್ದು ಅನ್ನೋ ಥರಾ ಬುರುಡೆ ಬಿಟ್ಟಿದ್ರು. (ಕುವೆಂಪು, ಪುತಿನ ಮತ್ತು ಬೇಂದ್ರೆ ಬಗ್ಗೆಯೂ ತಮ್ಮ ಇಂಥದ್ದೇ ಅಭಿಪ್ರಾಯಗಳನ್ನು ನಮ್ಮಲ್ಲೂ ತುಂಬಿದ್ದರು ಅನ್ನೋದು ನಮಗೆ ನಂತರ ಗೊತ್ತಾಗ್ತಾ ಹೋಯ್ತು!)

ಕಿರಂ, ಅಡಿಗರ ಪದ್ಯಗಳನ್ನು ಕೇಳಿಸುವ ಆ ಹೊತ್ತಿಗೆ ಸರಿಯಾಗಿ ಡಿಗ್ರಿಯಲ್ಲಿ ನಮಗೆ "ಶ್ರೀರಾಮನವಮಿಯ ದಿವಸ' ಪದ್ಯ ಪಠ್ಯವಾಗಿತ್ತು. ಕಿರಂ ನಮಗೆ ಕೇಳಿಸಲು ಆಯ್ಕೆ ಮಾಡಿಕೊಂಡಿದ್ದ ಪದ್ಯಗಳಲ್ಲಿ ಇದೂ ಒಂದಾಗಿತ್ತು. ರಾಮ ಅನ್ನೋ ಪಾತ್ರದ ಬಗ್ಗೆ ವೈಯಕ್ತಿಕವಾಗಿ ನನಗೆ ಸಾಕಷ್ಟು ತಕರಾರುಗಳಿವೆ, ಆ ಪದ್ಯದಲ್ಲಿನ ಕೆಲವು ಸಂಗತಿಗಳಿಗೆ ಕೂಡ. ಆದ್ರೆ ಪಠ್ಯವಾಗಿಬಿಟ್ಟಿತ್ತಲ್ಲ?! ಅದರ ಬಗ್ಗೆ ಪ್ರಶ್ನೆ ಕೇಳಿದ್ರೆ ಉತ್ತರಿಸಲೇಬೇಕಾದ ಅನಿವಾರ್ಯತೆಯಂತೂ ಇತ್ತು. ಕಿರಂ ಶುರು ಮಾಡಿದರು ಆ ಪದ್ಯ ಕೇಳಿಸಲು... ಇನ್ನೂ ಕೇಳಿಸುತ್ತಲೇ ಇದೆ ಅನ್ನೋ ಹಾಗಿದೆ ನನ್ನೊಳಗೆ!
** ** ** **
ಈಗಲೂ ಸಹ್ಯಾದ್ರಿ ಕಾಲೇಜು ಅಥವಾ ವಿವಿಯ ಕ್ಯಾಂಪಸ್ಸಲ್ಲಿ ಸಿಕ್ಕಾಗ ಆ ಉಪನ್ಯಾಸಕಿ ಎದುರಾದರೆ ಆಕೆಯ ಮುಖಾರವಿಂದ ಮಗ್ಗಲು ಬದಲಿಸುತ್ತದೆ. ನನಗೋ ಒಳಗೊಳಗೇ ನಗು ವಕ್ಕರಿಸುತ್ತದೆ. ಯಾರೇ ಬರಹಗಾರರಿರಲಿ, ಯಾವುದೇ ಕೃತಿ ಇರಲಿ, ಆ ವ್ಯಕ್ತಿ ಅಥವಾ ಕೃತಿ ಬಗೆಗಿನ ತಮ್ಮ ವೈಯಕ್ತಿಕ ಗ್ರಹಿಕೆ/ ಪೂರ್ವಗ್ರಹಗಳನ್ನು ವ್ಯಾಖ್ಯಾನಗಳ ರೂಪದಲ್ಲಿ ವಿದ್ಯಾರ್ಥಿಗಳ ತಲೆಗೆ ತುಂಬೋ ಇಂಥ ಮೇಸ್ಟ್ರುಗಳನ್ನು ಮೇಸ್ಟ್ರು ಅಂತ ಕರೆಯೋದಿರಲಿ, ಮಾನಸಿಕವಾಗಿಯಾದ್ರೂ ಹಾಗಂತ ಒಪ್ಪಿಕೊಳ್ಳೋದು ಹೆಂಗೆ?! ನನಗಂತೂ ಅಸಹ್ಯ ಅನ್ನಿಸುತ್ತೆ. ಛೆ, ಇಂಥವ್ರಿಗೆಲ್ಲ...  ಅಂತ ತಲೆಯಲ್ಲಿ ಬೈಗುಳ ಶುರುವಾಗೋ ಹೊತ್ತಿಗೆ ಮತ್ತೆ ಅಡಿಗರ ಪದ್ಯದ ಸಾಲು ನೆನಪಾಗುತ್ತೆ...

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!