10/5/14

ಅಡಿಗರು, ಮೇಸ್ಟ್ರು ಮತ್ತು ಸ್ವಪ್ರತಿಷ್ಠೆ

ಸಹ್ಯಾದ್ರಿ ಕಾಲೇಜು ಕ್ಯಾಂಪಸ್'ನ ಮರಗಳು ಆಗಷ್ಟೆ ಎಲೆಯುದುರಿಸಿ, ನಮಗೂ-ಬೇಸಿಗೆಗೂ ಸಂಬಂಧವಿಲ್ಲ ನೋಡ್ರಪ್ಪಾ ಎಂಬಂತೆ ತಲೆಯೆತ್ತಿ ನಿಂತಿದ್ದವು. ಅಂತಿಮ ವರ್ಷದ ಡಿಗ್ರಿಯ ಮಧ್ಯಾಹ್ನದ ತರಗತಿ ಆಗಷ್ಟೆ ಶುರುವಾಗಿತ್ತು. ತೀನಂಶ್ರೀಯವರ 'ಭಾರತೀಯ ಕಾವ್ಯಮೀಮಾಂಸೆ'ಯ ತರಗತಿಯದು. ನಮಗೆ ಗೊತ್ತಿದ್ದ ಕನ್ನಡದ ಪದ್ಯಗಳಿಗೆ ಅಲ್ಲಿದ್ದ ಮಾತುಗಳನ್ನು ಹೇಗೆ ಅನ್ವಯಿಸಬೇಕೆಂದು ಗೊತ್ತಾಗದೆ ಬೇಸತ್ತಿದ್ದೆವು. ಆದ್ರೆ ಯೂನಿವರ್ಸಿಟಿಯ ಮೂರ್ಖರಿಗೆಲ್ಲ ಆ ಪಠ್ಯವೇ ಭಕ್ಷ್ಯಭೋಜನ ಎಂಬಂತಾಗಿತ್ತು. ಈ ಎರಡೂ ತುದಿಯ ಮಧ್ಯೆ ಸಿಲುಕಿದ್ದ ಬಡಪಾಯಿಗಳೆಂದರೆ ಉಪನ್ಯಾಸಕರು. ಅವರು ನೆಟ್ಟಗೆ (ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ) ಪಾಠ ಮಾಡಬೇಕೆಂದರೆ ಆ ಪಠ್ಯದಲ್ಲಿದ್ದ ಸಂಗತಿಗಳಿಗೆ ಕನ್ನಡ ಪದ್ಯಗಳ ಉದಾಹರಣೆ ಕೊಡಬೇಕಿತ್ತು. ಆದರೆ ಹಾಗೆ ಉದಾಹರಣೆ ಕೊಡುವಲ್ಲಿ ಸೋಲುತ್ತಿದ್ದ ಅವರು, ಸಂಸ್ಕೃತದ ಕಾವ್ಯದಿಂದಲೇ ಉದಾಹರಣೆ ಹೆಕ್ಕುತ್ತಿದ್ದರು, ಅದರಲ್ಲೂ ಬಹುಪಾಲು ಉದಾಹರಣೆಗಳು ಅವರು ಕಷ್ಟಪಟ್ಟು, ಆಲೋಚನೆ ಮಾಡಿ ಹುಡುಕಿ ತಂದ ಉದಾಹರಣೆಗಳಂತೂ ಖಂಡಿತ ಆಗಿರುತ್ತಿರಲಿಲ್ಲ. ಹಾಗಾಗಿಯೇ ಕಾವ್ಯಮೀಮಾಂಸೆಯ ತರಗತಿಗಳಲ್ಲಿ ಕನ್ನಡ ಪದ್ಯ ಬರೆದವರು ಕಾಣಿಸಿಕೊಳ್ಳಲು ಪುಣ್ಯ ಮಾಡಿರಬೇಕಿತ್ತೋ ಏನೋ! ಹೀಗಿರುವಾಗ ಆ ದಿನದ ತರಗತಿಯಲ್ಲಿ ದಿಢೀರನೆ ಗೋಪಾಲಕೃಷ್ಣ ಅಡಿಗರು ಕಾಣಿಸಿಕೊಂಡಿದ್ದು ನನಗೆ ಶುರುವಿಗೆ ಪರಮಾಶ್ಚರ್ಯಕ್ಕೆ ಕಾರಣವಾಗಿತ್ತು.

ಪಾಠ ಹೇಳುತ್ತಿದ್ದ ಉಪನ್ಯಾಸಕಿ ಹೇಳತೊಡಗಿದ್ದರು, "ನೀವು ಅಡಿಗರ ಕವಿತೆಗಳನ್ನು ನೋಡಿ ಬೇಕಾದರೆ... ಎಲ್ರಿಗೂ ಅರ್ಥ ಆಗೋ ಹಾಗಿವೆಯಾ ಅವು? ಕೇವಲ ಪಂಡಿತರಿಗಷ್ಟೆ ಅರ್ಥ ಆಗೋವಂಥವು. ಪ್ರತಿಷ್ಠೆಗಾಗಿ ಕಾವ್ಯ ಬರೆದರೆ ಎಲ್ಲರನ್ನೂ ತಲುಪೋಕೆ ಸಾಧ್ಯವಿಲ್ಲ. ಅಡಿಗರ ಪದ್ಯಗಳಲ್ಲಿ ಪದಗಳ ದೊಂಬರಾಟವಷ್ಟೆ ಇದೆ. ಹಾಗಾಗಿ ಅಡಿಗರೂ ಸ್ವಪ್ರತಿಷ್ಠೆಗಾಗಿ ಪದ್ಯ ಬರೆದ್ರು ಅಂತ ಹೇಳಬಹುದು...'' ಆಯಮ್ಮ ಕಡೇ ಮಾತು ಮುಗಿಸೋದ್ರೋಳಗೆ ನನಗೆ ಸಿಟ್ಟು ನೆತ್ತಿಗೇರಿತ್ತು. ಭರದಿಂದ ಎದ್ದುನಿಂತು ಒಂದು ಕೇಳ್ವಿ ಒಗೆದೆ, "ಮೇಡಮ್, ಅಡಿಗರು ಸ್ವಪ್ರತಿಷ್ಠೆಗೋಸ್ಕರ ಪದ್ಯ ಕಟ್ಟಿದ್ರು ಅಂತ ಹೇಳಿದ್ರಿ. ಹಾಗಾದ್ರೆ ವಿಭಿನ್ನವಾಗಿ ಬರೆಯೋದು, ಹೊಸ ನುಡಿಗಟ್ಟುಗಳನ್ನು ಹುಟ್ಟುಹಾಕೋದು, ತನಗೆ ಸರಿ ಅನ್ನಿಸಿದ ದಾರಿಯೊಂದನ್ನು ಸೃಷ್ಟಿಸುವುದು ಸ್ವಪ್ರತಿಷ್ಠೆಯಾ? ಅದು ಸ್ವಪ್ರತಿಷ್ಠೆ ಅನ್ನೋದಾದ್ರೆ ಹೊಸತನ್ನು ಪ್ರತಿಪಾದಿಸಿದ ಎಲ್ರನ್ನೂ ನಾವು ಹಾಗೆ ಕರೀಬಹುದಲ್ಲ?!" ಆಯಮ್ಮ ನಗುವಲ್ಲದ ನಗುವ ನಗುತ್ತಾ ಮನಸ್ಸಿಗೆ ಬಂದಂತೆ ಸಮರ್ಥಿಸಿಕೊಂಡದ್ದಾಯ್ತು. ನಾನದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬಂತೆ ಅಡ್ಡಡ್ಡ ತಲೆಯಾಡಿಸಿ ಕುಂತದ್ದೂ ಆಯ್ತು.

ಆಯಮ್ಮನ ಅಡ್ಡಾದಿಡ್ಡಿ ಮಾತುಗಳನ್ನು ಕೇಳಿ ಶುರುವಿಗೆ ಸಿಡಿದ ಸಿಟ್ಟು ಆಮೇಲೆ ವ್ಯಂಗ್ಯದ ನಗುವಾಗಿ ಬಾಗಿ, ಅಡಿಗರ ಈ ಸುಲಲಿತ ಸಾಲುಗಳು ತಲೆಯಲ್ಲಿ ಗುಂಯ್'ಗುಡತೊಡಗಿದವು...
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
ಕರಗೀತು ಮುಗಿಲ ಬಳಗ
ಬಂದೀತು ಸುಧೆಯ ಮಳೆ, ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗ...

ಆಮೇಲೊಂದಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರೆದುರಿಗೆ ಆಯಮ್ಮನ ಮಾತನ್ನು ತಂದೆ, ಜರಿದೆ, ಇಂಥ ಕಾಲೇಜಿನಲ್ಲಿ ಇಂಥ ಮೇಸ್ಟ್ರುಗಳಿದ್ದಾರಲ್ಲ ಅಂತ ನಾಚಿಕೆಯಾಗ್ತಿದೆ ಎಂದೆ. ಆಕೆ ಮುನಿಸಿಕೊಂಡು ಸಮಾರಂಭದ ಊಟ ಬಿಟ್ಟರು. ಆಯಮ್ಮನ ಪಾಲನ್ನೂ ನಾನೇ ತಿಂತೇನೆ ಬಿಡ್ರೋ ಅಂತ ಸಹಪಾಠಿಗಳಿಗೆ ಸಮಾಧಾನಿಸಿದೆ. ಅಡಿಗರ ಪದ್ಯದ ಸಾಲುಗಳು ತಲೆಯಲ್ಲಿ ಮಿಂಚಿ ಸಣ್ಣಗೆ ನಗು ಹೊರಳಿತು ಮೊಗದಲ್ಲಿ...

ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ,
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
ಕೊಟ್ಟೆವಿದೋ ವೀಳೆಯವನು;
ನಿಮ್ಮಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವು ನಾವು ಹೊಸ ನಾಡೊಂದನು,
ಸುಖದ ಬೀಡೊಂದನು!
** ** ** **
ಅಲ್ಲಿಗೆ ಸರಿಯಾಗಿ ಎರಡು ವರ್ಷದ ಹಿಂದೆ ಅಡಿಗರು ಅಂದ್ರೆ ಮೂಗು ಮುರಿಯುತ್ತಿದ್ದ ನಾನು, ಅದೇ ಅಡಿಗರ ಬಗೆಗಿನ ಮಾತೊಂದರ ಕಾರಣಕ್ಕೆ ಆ ಉಪನ್ಯಾಸಕಿಯೊಂದಿಗೆ ವೈಮನಸ್ಯ ಕಟ್ಟಿಕೊಳ್ಳುವಂತಾಗಿದ್ದು ದೊಡ್ಡ ಮ್ಯಾಜಿಕ್. ಆ ಮ್ಯಾಜಿಕ್ ಮಾಡಿದವರು ಕಿರಂ ನಾಗರಾಜ್...

ಆದರೂ ನೀ ದಗಾಖೋರ, ನಾ ಬಲ್ಲೆ; ಹಳ್ಳಿಶಾಲೆ
ಮೇಷ್ಟರಿಲ್ಲದ ವೇಳೆ ತಾಳ ಹಿಡಿದು
ನೀ ಭಾಗವತ ಭಾರಿಸಿದೆ; ನಾನು ಬಲಭೀಮ
ರೌದ್ರಾವತಾರಕ್ಕೆ ರೂಲುದೊಣ್ಣೆ&
ಗದೆ ಹಿಡಿದು ತಿರುವಿ ಹೂಂಕರಿಸಿದ್ದೆ; ಇಪ್ಪತ್ತೈದು
ಕಮ್ಮುಚಟ್ಟುಗಳು ಮುಗಿವಷ್ಟರೊಳಗೆ
ಹೂಜೆ ಬರಿಹೋಳು; ತರಗತಿಯ ಭೋರ್ನಗೆ ಹುಯಿಲು;
ಬೆನ್ನ ಬಾಸುಂಡೆಯೋ ಮಾಯದ ಕಥೆ

......ಕಿರಂ ತಮ್ಮ ಬಲಗೈನ ಬೆರಳುಗಳನ್ನು ಮೆದುವಾಗಿ ಒಂದರ ಹಿಂದೊಂದು ಮತ್ತೆ ಮತ್ತೆ ಸರಿಯುವಂತೆ ಮಾಡುತ್ತಾ ಅಡಿಗರ 'ಕೂಪಮಂಡೂಕ' ಪದ್ಯದ ಸಾಲುಗಳನ್ನು ಕೇಳಿಸುತ್ತಾ, ಅದರ ಬಗ್ಗೆ ಅವರದೇ ಅದೊಂಥರದ ಧ್ಯಾನದಲ್ಲಿ ಮಾತಾಡ್ತಾ ಇದ್ರೆ... ಆಹ್... ಈವಯ್ಯನ ಬಾಯಲ್ಲಿ ಪದ್ಯ ಓದಿಸ್ಕೊಳ್ಳೋಕೂ ಪುಣ್ಯ ಮಾಡಿರ್ಬೇಕು ಬಿಡು ಕವಿಯಾದೋರು ಅನ್ನಿಸಿಬಿಟ್ಟಿತ್ತು! ನೀನಾಸಂನ ಶಿಬಿರವೊಂದರಲ್ಲಿ ಹಾಗೊಮ್ಮೆ ಎದುರಾಗಿದ್ದ ಅಡಿಗರ ಪದ್ಯಗಳು ಥಟ್ಟನೆ ಆಪ್ತ ಅನ್ನಿಸಿದ್ದು ಕಿರಂ ಆ ಪದ್ಯಗಳನ್ನು ಕೇಳಿಸಿದ ಮೇಲಷ್ಟೆ. ಡಿಗ್ರಿಗೆ ಬರುವತನಕವೂ ನಮ್ಮ ಕನ್ನಡ ಮೇಸ್ಟ್ರುಗಳು (ಈ ಪದಬಳಕೆಗೆ ಅವರು ಯೋಗ್ಯರಲ್ಲ ಅನಿಸಿದರೂ ಬಳಸ್ತಿದ್ದೇನೆ...) ಅಡಿಗರ ಪದ್ಯಗಳನ್ನು ಬೇರಾವುದೋ ಲೋಕದ ಬಗ್ಗೆ ಕಟ್ಟಿರುವಂಥದ್ದು, ಜಪ್ಪಯ್ಯ ಅಂದ್ರೂ ನಮಗಾರಿಗೂ ಅರ್ಥವಾಗದ್ದು ಅನ್ನೋ ಥರಾ ಬುರುಡೆ ಬಿಟ್ಟಿದ್ರು. (ಕುವೆಂಪು, ಪುತಿನ ಮತ್ತು ಬೇಂದ್ರೆ ಬಗ್ಗೆಯೂ ತಮ್ಮ ಇಂಥದ್ದೇ ಅಭಿಪ್ರಾಯಗಳನ್ನು ನಮ್ಮಲ್ಲೂ ತುಂಬಿದ್ದರು ಅನ್ನೋದು ನಮಗೆ ನಂತರ ಗೊತ್ತಾಗ್ತಾ ಹೋಯ್ತು!)

ಕಿರಂ, ಅಡಿಗರ ಪದ್ಯಗಳನ್ನು ಕೇಳಿಸುವ ಆ ಹೊತ್ತಿಗೆ ಸರಿಯಾಗಿ ಡಿಗ್ರಿಯಲ್ಲಿ ನಮಗೆ "ಶ್ರೀರಾಮನವಮಿಯ ದಿವಸ' ಪದ್ಯ ಪಠ್ಯವಾಗಿತ್ತು. ಕಿರಂ ನಮಗೆ ಕೇಳಿಸಲು ಆಯ್ಕೆ ಮಾಡಿಕೊಂಡಿದ್ದ ಪದ್ಯಗಳಲ್ಲಿ ಇದೂ ಒಂದಾಗಿತ್ತು. ರಾಮ ಅನ್ನೋ ಪಾತ್ರದ ಬಗ್ಗೆ ವೈಯಕ್ತಿಕವಾಗಿ ನನಗೆ ಸಾಕಷ್ಟು ತಕರಾರುಗಳಿವೆ, ಆ ಪದ್ಯದಲ್ಲಿನ ಕೆಲವು ಸಂಗತಿಗಳಿಗೆ ಕೂಡ. ಆದ್ರೆ ಪಠ್ಯವಾಗಿಬಿಟ್ಟಿತ್ತಲ್ಲ?! ಅದರ ಬಗ್ಗೆ ಪ್ರಶ್ನೆ ಕೇಳಿದ್ರೆ ಉತ್ತರಿಸಲೇಬೇಕಾದ ಅನಿವಾರ್ಯತೆಯಂತೂ ಇತ್ತು. ಕಿರಂ ಶುರು ಮಾಡಿದರು ಆ ಪದ್ಯ ಕೇಳಿಸಲು... ಇನ್ನೂ ಕೇಳಿಸುತ್ತಲೇ ಇದೆ ಅನ್ನೋ ಹಾಗಿದೆ ನನ್ನೊಳಗೆ!
** ** ** **
ಈಗಲೂ ಸಹ್ಯಾದ್ರಿ ಕಾಲೇಜು ಅಥವಾ ವಿವಿಯ ಕ್ಯಾಂಪಸ್ಸಲ್ಲಿ ಸಿಕ್ಕಾಗ ಆ ಉಪನ್ಯಾಸಕಿ ಎದುರಾದರೆ ಆಕೆಯ ಮುಖಾರವಿಂದ ಮಗ್ಗಲು ಬದಲಿಸುತ್ತದೆ. ನನಗೋ ಒಳಗೊಳಗೇ ನಗು ವಕ್ಕರಿಸುತ್ತದೆ. ಯಾರೇ ಬರಹಗಾರರಿರಲಿ, ಯಾವುದೇ ಕೃತಿ ಇರಲಿ, ಆ ವ್ಯಕ್ತಿ ಅಥವಾ ಕೃತಿ ಬಗೆಗಿನ ತಮ್ಮ ವೈಯಕ್ತಿಕ ಗ್ರಹಿಕೆ/ ಪೂರ್ವಗ್ರಹಗಳನ್ನು ವ್ಯಾಖ್ಯಾನಗಳ ರೂಪದಲ್ಲಿ ವಿದ್ಯಾರ್ಥಿಗಳ ತಲೆಗೆ ತುಂಬೋ ಇಂಥ ಮೇಸ್ಟ್ರುಗಳನ್ನು ಮೇಸ್ಟ್ರು ಅಂತ ಕರೆಯೋದಿರಲಿ, ಮಾನಸಿಕವಾಗಿಯಾದ್ರೂ ಹಾಗಂತ ಒಪ್ಪಿಕೊಳ್ಳೋದು ಹೆಂಗೆ?! ನನಗಂತೂ ಅಸಹ್ಯ ಅನ್ನಿಸುತ್ತೆ. ಛೆ, ಇಂಥವ್ರಿಗೆಲ್ಲ...  ಅಂತ ತಲೆಯಲ್ಲಿ ಬೈಗುಳ ಶುರುವಾಗೋ ಹೊತ್ತಿಗೆ ಮತ್ತೆ ಅಡಿಗರ ಪದ್ಯದ ಸಾಲು ನೆನಪಾಗುತ್ತೆ...

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

2 ಕಾಮೆಂಟ್‌ಗಳು:

  1. ಪ್ರಿಯ ನಾಗರಾಜ್, 'ನಿನ್ನ ಅಡಿಗರು, ಮೇಷ್ಟ್ರು ಮತ್ತು ಸ್ವಪ್ರತಿಷ್ಠೆ' ಈಗಷ್ಟೆ ಓದಿದೆ. ನೀನು ಉದ್ಧರಿಸಿದ ಉದಾಹರಣೆಯಲ್ಲಿದ್ದಂತ ಉಪನ್ಯಾಸಕರು ನಮ್ಮ ಕನ್ನಡ ತರಗತಿಗಳಲ್ಲೂ ಹೇರಳವಾಗಿದ್ದರು. "ನೂರು ದೇವರನೆಲ್ಲ ನೂಕಾಚೆ ದೂರ/ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ" ಎಂಬ ಪದ್ಯವಿದೆ ನೋಡು ಕುವೆಂಪು ಅವರದು, ಅದನ್ನು ನಮ್ಮ ಟೀಚರೆನ್ನುವ ಟೀಚರು "ನೋಡಿ ಇಲ್ಲಿ ಕವಿಯು ದೇವರನ್ನು ಬೈದಿಲ್ಲ. ಯಾವ ಟಾಯಮ್ಮಿನಲ್ಲೂ ನಾವು ದೇವರನ್ನು ಬೈಯ್ಯಬಾರದು ಅಂತ ನೀವೆಲ್ಲ ನೆನಪಿಡಬೇಕು. ಇಲ್ಲಿ ಕವಿ ಭಾರತಾಂಬೆಯನ್ನು ಪೂಜಿಸುವ ಭಾರ ನಮ್ಮ ಮೇಲಿದೆ ಅಂತ ಸಂಕಟದಿಂದಲೇ ಹೇಳಿದ್ದಾರೆ" ಎಂದು ಏನೇನೋ ಅಸಂಬದ್ಧ ಮಾತಾಡಿ ವಿದ್ಯಾರ್ಥಿಗಳ ನಗೆಪಾಟಲಿಗೀಡಾಗುತ್ತಿದ್ದರು. ಆಗೆಲ್ಲ ನಾನೂ ನಗುತ್ತಿದ್ದೇನೆ ಹೊರತು ನೀನು ಹೇಳಿದ ರೀತಿಯಲ್ಲಿ ವಿರೋಧಿಸುತ್ತಿರಲಿಲ್ಲ. ಎಲ್ಲಿ ನಮ್ಮ ಇಂಟರ್ನಲ್ ಮಾರ್ಕ್ಸುಗಳಿಗೆ ಕಳ್ಳಿ ಹಾಕುತ್ತಾರೋ ಅಂತ ಎಲ್ಲರೂ ಸುಮ್ಮನಾಗಿಬಿಡುತ್ತಿದ್ದೆವು. ಈಗ ಯೋಚಿಸಿದರೆ ಅನ್ನಿಸುತ್ತದೆ, ಅಂದು ಐದೋ ಹತ್ತೋ ಮಾರ್ಕ್ಸಿಗಾಗಿ ವಿವೇಕ ಮಾರಿಕೊಂಡೆನೇನೋ ಅಂತ. ಇಂಥ ಲೇಖನಗಳು ನಮ್ಮ ಒಳಗಣ್ಣು ತೆರೆಸುವಂತವು. ಥ್ಯಾಂಕ್ಸ್, ಕಾವ್ಯ

    ಪ್ರತ್ಯುತ್ತರಅಳಿಸಿ
  2. ಹೇಯ್... ಥ್ಯಾಂಕ್ಸ್ ಅಂತೆಲ್ಲ ಹೇಳಿದ್ರೆ ಕಾಲು ಮುರಿವೆ ಹೆಣ್ಣೇ ;)

    ಪ್ರತ್ಯುತ್ತರಅಳಿಸಿ