22/12/12

ಮಂಡಕ್ಕಿಯಡಿ ಇದ್ದ ಪೇಪರ್ರು ಮತ್ತು ನನ್ನೆಸ್ರು














ಮಾರುತಿ ಮೇಸ್ಟ್ರು, ಮುತ್ತಯ್ಯ ಮೇಸ್ಟ್ರು, ಗುರುನಾಥ್ ಮತ್ತು ತಿಪ್ಪೇಸ್ವಾಮಿ ಸರ್ ಜೊತೆ ನಾನೂ ಹೆಜ್ಜೆ ಹಾಕಿದ್ದೆ. ಅವತ್ತಿನ ಕ್ಲಾಸುಗಳನ್ನು ಮುಗಿಸಿಕೊಂಡು ಮೇಸ್ಟ್ರ ರೂಮಿನಲ್ಲಿ ಹಲವು ಸುತ್ತಿನ 'ಪದ್ಯದ್ಹರಟೆ'ಯನ್ನೂ ಮುಗಿಸಿಕೊಂಡ ನಮ್ಮ ಗುಂಪು ಹೊರಟಿದ್ದಿದ್ದು ಗಣೇಶ್ ಭವನದ ಕಡೆ. ಅವರೆಲ್ಲಾ ಪಾಠ ಹೇಳುವುದನ್ನು ಮುಗಿಸಿಕೊಂಡೂ, ನಾನು ಪಾಠ ಕೇಳುವುದನ್ನು ಮುಗಿಸಿಕೊಂಡೂ ಬಂದುದಾಗಿತ್ತು.

ಗಣೇಶ್ ಭವನ ಸ್ಟಾಪಿನೆದುರು ಒಂದು ಪುಟಾಣಿ ಹೋಟೆಲ್. ಎಲ್ರಿಗೂ ಅಲ್ಪಸ್ವಲ್ಪ ಹಸಿವಾಗಿತ್ತು. ಆದ್ರೆ ಅಲ್ಲಿದ್ದದ್ದು ಮಂಡಕ್ಕಿ, ಬೋಂಡಾ ಮಾತ್ರ. ಆದಂಗಾಗ್ಲಿ ಅಂತ ಜೈ ಅಂದ್ಮೇಲೆ ಎಲ್ರ ಎದುರೂ ಟೇಬಲ್'ನ ಮೇಲೆ ಒಂದು ಮಂಡಕ್ಕಿ ಗುಡ್ಡೆ ಮತ್ತು ಎರಡೆರಡು ಮೆಣಸಿನಕಾಯಿ ಬೋಂಡಾಗಳು ಕಾಣಿಸಿಕೊಂಡ್ವು. ದೊಡ್ಡೋರ ಮಾತು ಮುಂದುವರಿದಿತ್ತು. ನಾನು ಆಗಾಗ ಮಾತಿನ ಹೊಗ್ಗರಣೆ ಹಾಕುತ್ತಾ, ಹ್ಞಾಂ..ಹ್ಞೂಂ..ಎನ್ನುತ್ತಾ ಮಂಡಕ್ಕಿ ಮೆಲ್ಲುತ್ತಿದ್ದೆ. ನಮ್ಮ ಮಂಡಕ್ಕಿ ಭೋಜನ ಅರ್ಧ ಮುಗೀತು ಅನ್ನುವ ಹೊತ್ತಿಗೆ ಹೋಟೆಲಿನವನು ಮಂಡಕ್ಕಿ ಕೊಟ್ಟಿರೋದು 'ಕಾಲೇಜುರಂಗ'ದ(ಕನ್ನಡಪ್ರಭ) ಶೀಟ್ ಹರಿದು ಅನ್ನೋದು ನಂಗೆ ಗೊತ್ತಾಗಿಹೋಗಿತ್ತು. ಹೋಟೆಲಿನವನ ಮೇಲೆ ಸಿಟ್ಟು ಬಂತಾದರೂ ಪಾಪ..ಅವನಿಗೇನು ಗೊತ್ತು, ಅದು ಸಾವಿರಾರು ಹುಡುಗ-ಹುಡುಗಿಯರ ಕನಸಿನ ರೂಪು ಅಂತ ನಂಗೆ ನಾನೇ ಸಮಾಧಾನ ಮಾಡಿಕೊಂಡೆ.

ಇಷ್ಟೆಲ್ಲಾ ತಲೆಯೊಳಗೆ ಬಂದು ಹೋಗೋದ್ರೊಳಗೆ ಮೇಸ್ಟ್ರುಗಳ ಮಂಡಕ್ಕಿ ಮುಗಿದು, ಅವರಿಗೆ ಮಂಡಕ್ಕಿ ಸಿಕ್ಕಿದ್ದ ಪೇಪರನ್ನೇ ಮಡಿಚಿ ಕೈ ಒರೆಸಿಕೊಂಡು ಬಿಸಾಡುವ ಸಿದ್ಧತೆ ನಡೆದಿತ್ತು. ನಾನೂ ಹಾಗೇ ಮಾಡಬೇಕೆಂದುಕೊಂಡು ಉಳಿದಿದ್ದ ಮಂಡಕ್ಕಿಯನ್ನು ಸರಸರ ಸುರಿದುಕೊಳ್ಳತೊಡಗಿದೆ. ಮಂಡಕ್ಕಿ ಅರುಗಾಗುತ್ತಾ ಹೋದಂಗೆ ಅಲ್ಲಿ ಕಂಡ ಚಿತ್ರಣಕ್ಕೆ ಥಟಕ್ಕನೆ ಕಣ್ಣಗಲಿದವು. ಅದು ನಾ ಬರೆದ ಬರಹಾನೇ ಇರ್ಬೋದಾ ಅನ್ನಿಸ್ತು..ಹೌದು...'ಪುಟ್ಟಪ್ಪ ಎಂಬ ದೊಡ್ಡ ಬೆಟ್ಟ'...ಅಂತ ಕುವೆಂಪು ಬಗ್ಗೆ ನಾನೇ ಬರ್ದಿದ್ದದು. ಹುಡುಕಿದೆ, ಬೋಂಡಾದ ಎಣ್ಣೆ ಹನಿದಿದ್ದ ಜಾಗದಲ್ಲಿ ನನ್ನ ಹೆಸರು ತೇಲಾಡುತ್ತಿತ್ತು. ಬಡ್ಡೀಮಕ್ಳು ಅಂತ ಬಯ್ಬೇಕು ಅನ್ಸಿದ್ರೂ, ಆಗಷ್ಟೇ ಊದಿಗಡ್ಡಿ ಹಚ್ಚಿ ನಾವಿದ್ದ ಕೋಣೆಗೆ ಘಮ ತುಂಬಿದ್ದ ಹೋಟೆಲಿನವನ ಪಾಪದ ಮುಖ ನೋಡಿ ಅದೂ ಕರಗಿಹೋಯ್ತು.

1 ಕಾಮೆಂಟ್‌:

  1. nanagoo hinge aagittu... nanna article banda page male neerinalli oddeyagi jayanagara 4th blocknalli biddiddare.... :( ettikollalu hoguvastaralli avanyaro chappaligaalannu oori munde hoge bitta... thumba bejaragittu avatthu... adare idakke vyatiriktavaada innondu ghtatane... kalejurangadalle bandidda article ondakke punjabninda sainikarobbaru pratikriye kalisiddaru... avarige bonda katti kotta papernalli kannada iruvudu nodi khushiyinda odidarante...

    ಪ್ರತ್ಯುತ್ತರಅಳಿಸಿ