2/11/12

ಕನಿಷ್ಠ ಪ್ರೇಮಪತ್ರ ಬರೆಯಲಿಕ್ಕಾದರೂ...

ಎಲ್ಲರೂ ನೋಟ್ಸ್ ತೋರಿಸ್ತಾ ಹೋದ್ರು. ಮಾಮೂಲಿನಂತೆ ಲೆಕ್ಚರರ್ ಸೈನ್ ಹಾಕೋದು, ಗುಡ್-ಫೈನ್ ಅನ್ನೋದು ನಡೀತಾ ಇತ್ತು. ನನ್ನ ಸರದಿ ಬಂದಾಗ ನಾನೂ ನೋಟ್ಸ್ ಹಿಡಿದು ಅತ್ತ ನಡೆದೆ. ನನ್ನ ನೋಟ್ಸ್ ನೋಡಿದ ಲೆಕ್ಚರರ್  ಅದನ್ನು ಹಾಗೆ ನೋಡಿಕೊಳ್ಳುತ್ತಲೇ ಕ್ಲಾಸಿನ ಮಧ್ಯಭಾಗಕ್ಕೆ ಬಂದು ನಿಂತ್ರು. ಏನೋ ಗ್ರಹಚಾರ ಬಂತಲ್ಲಪ್ಪಾ ಅಂತ ಮನಸ್ಸಲ್ಲೇ ಉಗುಳು ನುಂಗಿದೆ. ಎಲ್ಲರತ್ತ ನನ್ನ ನೋಟ್ಸ್ ತೋರಿಸಿದ ಲೆಕ್ಚರರ್ ಅಂದಿದ್ರು....

'ನಾನೇನಾದ್ರೂ ಹುಡುಗಿಯಾಗಿದ್ದಿದ್ರೆ ನಾಗರಾಜ್-ಗೆ ಒಂದು ಲವ್ ಲೆಟರ್ ಬರೆದು ಕೊಟ್ಬಿಡ್ತಿದ್ದೆ...!'

ಕ್ಷಣದ ಹಿಂದೆ ನಿಶ್ಯಬ್ಧವಾಗಿದ್ದ ಕ್ಲಾಸಿನಲ್ಲಿ ನಮ್ಮೂರಿನ ಮಳೆಗಾಲದಲ್ಲಿ ದಿಢೀರನೆ ಬರುವ ದೊಡ್ಡಹಳ್ಳದಂತೆ ನಗುವಿನ ಅಲೆಗಳು ಶುರುವಾದ್ವು! ಹುಡುಗೀರೆಲ್ಲಾ ಬಾಯಿಗೆ ಅಡ್ಡ ಕೈಹಿಡಿದು ಅತ್ತ ಅಚ್ಚರಿ ಆಯ್ತು ಅನ್ನೋ ಥರಾ, ಇತ್ತ ನಾಚಿಕೆಯೂ ಆಯ್ತು ಅನ್ನೋ ಥರಾ ಮುಸಿಮುಸಿ ನಗ್ತಾ ಇದ್ರು. ಇನ್ನು ಹುಡುಗರ ನಗು ಕೇಳಬೇಕಾ...ಊಹೆ ಮಾಡ್ಕೊಳಿ......
* * * * *
ಅವರ ಹೆಸರು ಸೋಮಾನಾಯಕ್. ಪಿಯು'ನಲ್ಲಿ ನಮ್ಮ ಹಿಂದಿ ಲೆಕ್ಚರರ್. ನನ್ನ ಹಿಂದಿ ನೋಟ್ಸ್ ನೋಡಿ ಆ ಮಾತಾಡಿದ್ದು ಅವರು. ಹೌದು ನನ್ನೊಳಗಿನ ಹಲವು ಕಾಂಪಿಟೇಶನ್-ಗಳಲ್ಲಿ ಕನ್ನಡ ಮತ್ತು ಹಿಂದಿ ಕೈಬರಹದ್ದೂ ಒಂದು. ನಾನು ಹಿಂದಿಗಿಂತ ಕನ್ನಡವನ್ನೂ, ಕನ್ನಡಕ್ಕಿಂತ ಹಿಂದಿಯನ್ನೂ ಚಂದ ಬರೆಯಬಲ್ಲೆ. ಈಗಲೂ ಆ ಜಿದ್ದಾಜಿದ್ದಿ ನನ್ನೊಳಗೆ ಇದ್ದಿದ್ದೇ.

ಆದರೆ ಟೈಪಿಸುವುದನ್ನು ಕಲಿತ ಮೇಲೆ ಹೊಸ ಆತಂಕ ಶುರುವಾಗಿದೆ. ನನ್ನ ಕೈಬರಹವನ್ನು ನಾನೆಲ್ಲಿ ಕಳೆದುಕೊಳ್ತೀನೋ ಅನ್ನೋ ಭಯ ಕಾಡ್ತಾ ಇದೆ. ನನ್ನ ಕೈಬರಹವನ್ನು ನೋಡಿ ಅದೆಷ್ಟು ಮಂದಿ ಮೇಸ್ಟ್ರುಗಳು ಮೆಚ್ಚುಗೆ ಕೊಟ್ಟಿದ್ರು...ಅದೆಷ್ಟು ಮಂದಿ ಗೆಳೆಯ-ಗೆಳತಿಯರು ಸೂಪರ್ಬ್ ಅಂದಿದ್ರು...ಸೋಮಾನಾಯಕ್ ಸರ್  ಅಂತೂ ನೇರವಾಗಿ ಹೇಳಿದ್ರು. ಆದ್ರೆ ಅದೆಷ್ಟು ಮಂದಿ ಅಂತಹ ಮಾತನ್ನು ಹೇಳದೆ ಉಳಿಸಿಕೊಂಡರೋ ಅನ್ನೋ ಆಲೋಚನೆ ಬಂದಾಗ ನಗು ಬರುತ್ತೆ...

ಅದೇನೇ ಇರ್ಲಿ..ನನ್ನ ಸೊಗಸಾದ ಕೈಬರಹ ನೋಡಿ ಅದೆಷ್ಟು ಮಂದಿಗೆ ನನ್ನ ಮೇಲೆ ಪ್ರೀತಿಯಾಯ್ತು ಅನ್ನೋದು ಬೇರೆ ಮಾತು. ಆದರೆ ಈಗ ಉಳಿದಿರೋದು, ಮನದನ್ನೆಯಾಗಲಿರೋ ಹುಡುಗಿಗೆ ಕನಿಷ್ಠ ಒಂದು ಸೊಗಸಾದ ಪ್ರೇಮಪತ್ರ ಬರೆಯಲಿಕ್ಕಾದರೂ ನನ್ನ ಕೈಬರಹವನ್ನು ನಾನು ಕಾಪಿಡಬೇಕು! ಅದಕ್ಕಾಗಿ ಏನಾದ್ರೂ ಐಡಿಯಾ ಇದ್ರೆ ಹೇಳಿ ಮಾರಾಯ್ರೆ....

1 ಕಾಮೆಂಟ್‌:

  1. ಈಗ ನಿಮ್ಮ ಬರಹಗಳು ಈ ಚನ್ನಾಗಿ ಅಂತ ಆದ್ರೆ ಈಗಲೇ ಒಂದು ಪತ್ರ ಬರೆದಿಟ್ಟು ಕೊಳ್ಳಿ.. ಹೇಗೊ ನಿಮ್ಮ ಮನದನ್ನೆ ಆಗೊಳು ಉದ್ದ ಜಡೆ ಇರಬೇಕು ಎನ್ನುವ ನಿಮ್ಮ ಹಂಬಲದ ಮೇಲೆ ಒಂದು ಕವನ ಬರೆದು ಇಟ್ಟುಕೊಳ್ಳಿ ಅವಳು ಸಿಕ್ಕಾಗ ಕೊಟ್ಟರಾಯಿತು..ಅದಕ್ಯಾಕೆ ಚಿಂತೆ ಮಾರಾಯ್ರೆ

    ಪ್ರತ್ಯುತ್ತರಅಳಿಸಿ