31/10/12

ದಿ ಅಬ್ಸರ್ವರ್

ಯೂನಿವರ್ಸಿಟಿಯ ಎರಡನೇ ವರ್ಷದ ದಿನಗಳವು. ಅಕಾಡೆಮಿಕ್-ನ ಹರಿವಿಗೆ ಸಿಕ್ಕಿ ಮನಸ್ಸಿಗ್ಯಾಕೋ ಮಂಕು ಕವಿದಿತ್ತು. ನಗು ನನ್ನ ಮುಖದಲ್ಲಿ ಗುಂಪಿಗೆ ಸೇರದ ಪದವಾಗಿತ್ತು. ಏನನ್ನೂ ಬರೆಯದೆ ಬಹಳ ದಿವಸವಾಗಿತ್ತು. ಬರಹಕ್ಕೆ ಬೆನ್ನು ತೋರಿಸಿಬಿಟ್ಟೆನಾ ಅನ್ನೋ ದುಗುಡ ಕಾಡಹತ್ತಿತ್ತು. ಅದೇ ಗುಂಗಿನಲ್ಲಿ ನಾ ಯಾವಾಗ್ಲೂ ಹೋಗ್ತಿದ್ದ ಎಂ.ಪಿ ಕಂಪ್ಯೂಟರ್ಸ್ ಕಡೆ ನಡೆದಿದ್ದೆ ಒಂದು ಮಧ್ಯಾಹ್ನ...
 *****
'ಅಂಕಲ್ ನಿಮ್ಗೆ ಅಪ್ಪ ಇಲ್ವಾ...?'

ಆ ಅಂಗಡಿಯ ಮುಂಭಾಗದಲ್ಲಿ ಕುಳಿತಿದ್ದ ನಿಮ್ರಾ ಅನ್ನೋ ಎರಡನೇ ಕ್ಲಾಸು ಹುಡುಗಿ ನನ್ನನ್ನು ನೋಡುತ್ತಾ ಸ್ಮೈಲ್ ಮಾಡುತ್ತಲೇ ಒಂದು ಪ್ರಶ್ನೆ ಎಸೆಯಿತು...

'ಇದ್ದಾರೆ..'

'ಹಾಗಾದ್ರೆ ಅಮ್ಮ ಇಲ್ವಾ...?'

(ಇಲ್ಲ ಅಂದ್ರೆ ಹುಡುಗಿ ಎಂಥ ಯೋಚ್ನೆ ಮಾಡ್ತಿದೆ ಅನ್ನೋದು ಗೊತ್ತಾಗೋಲ್ಲ ಅನ್ನಿಸಿ)
'ಇದ್ದಾರೆ ಪುಟ್ಟೀ..ಯಾಕೆ ಈ ಪ್ರಶ್ನೆ..?!'

"ಮತ್ತೆ ನೀವ್ ಯಾವಾಗ್ಲೂ ಮುಖಾನ 'ಹಿಂಗ್' ಮಾಡ್ಕೊಂಡಿರ್ತೀರಿ...?"

ಎಂಥ ಹೇಳಬೇಕೋ ಗೊತ್ತಾಗಲಿಲ್ಲ. ಆ ಹೊತ್ತಿಗೆ ಆ ಮಗುವಿನ ಮಟ್ಟಕ್ಕಿಳಿದು ಮಾತಾಡೋದ್ರಲ್ಲಿ ನಾನು ನಿಜಕ್ಕೂ ಸೋತಿದ್ದೆ.
****
ಒಂದು ದಿನ ಇದ್ದಕ್ಕಿದ್ದಂತೆ ನಿಮ್ರಾ ಕ್ಯಾಂಪಸ್ಸಿನಲ್ಲಿ ಸಿಕ್ಕಳು. ಅವಳ ಜೊತೆ ತಂಗಿ ಅರ್ಫಾ ಕೂಡಾ ಇದ್ಲು. ಅವರಿಬ್ಬರು ಓದುತ್ತಿದ್ದ ಶಾಲೆ ನಮ್ಮ ಕ್ಯಾಂಪಸ್ಸಿನಲ್ಲೇ ಇತ್ತು.

'ಅಂಕಲ್ ಇವತ್ತು ನಮ್ ಸ್ಕೂಲ್-ಡೇ. ನಾವೆಲ್ಲಾ ಡ್ಯಾನ್ಸ್ ಮಾಡ್ತಿದ್ದೀವಿ. ಸಾಯಂಕಾಲ ನೀವೂ ಬರ್ಬೇಕು. ಅಲ್ಲಿ ಚೆನ್ನಾಗಿ ನಗ್ಬೇಕೂ...' ಅಂತ ಮಾತಾಯಿತು. ನಾನೂ ಒಪ್ಪಿಕೊಂಡು ಹೋದೆ.

****

ಕಾರ್ಯಕ್ರಮ ಹೇಗಿತ್ತು ಅಂದ್ರೆ...
ಆ ವಾರದ ಲ್ಯಾಬ್ ಜರ್ನಲ್-ನ ತಂಡದಲ್ಲಿ ನಾನಿರಲಿಲ್ಲ. ಆದರೂ ಮಕ್ಕಳ ಆ ಉತ್ಸಾಹಕ್ಕೆ ಮನಸೋತು ಒಂದು ಸ್ಪೆಷಲ್ ಸ್ಟೋರಿ ಮಾಡಿದ್ದೆ. ಸಂಜೆ ಜರ್ನಲ್-ನ ಪೇಜ್ ಮುಗಿದಿದೆ ಅಂತ ಗೊತ್ತಾದ ಮೇಲೆ ಡಿಪಾರ್ಟ್-ಮೆಂಟ್ ಕಡೆ ಹೆಜ್ಜೆ ಹಾಕುವಾಗ ನಮ್ಮ ಪದ್ಮನಾಭ ಸರ್(ಆ ವಾರದ ಲ್ಯಾಬ್ ಜರ್ನಲ್ ಗೈಡ್ ಆಗಿದ್ದವರು) ಸಿಕ್ಕು 'ತುಂಬಾ ಚೆನ್ನಾಗಿ ಬಂದಿದೆ ನಾಗರಾಜ್ ಸ್ಟೋರಿ..ಪ್ರತಿವರ್ಷ ಸ್ಕೂಲ್-ಡೇ ಆಗ್ತಾನೇ ಇರ್ತಿತ್ತು. ಆದ್ರೆ ನಮ್ಮವ್ರು ಯಾರೂ ಅದನ್ನು ಅಬ್ಸರ್ವ್ ಮಾಡೇ ಇಲ್ಲ ನೋಡಿ..' ಅಂದ್ರು.ಮತ್ತೆ ನನ್ನ ಬರಹಕ್ಕೆ ನಾ ಮರಳಿದ್ದೆ.ಮುಖದಲ್ಲಿ ತಂತಾನೆ ನಗು ಸೆರೆಹೊಡೆದಿತ್ತು. ಮನಸ್ಸಲ್ಲೇ ನಿಮ್ರಾಳನ್ನು ನೆನೆದೆ.

1 ಕಾಮೆಂಟ್‌:

  1. ನಿಮ್ಮ ಬರಹ ಚೆನ್ನಾಗಿದೆ.ನಾನು ಕೂಡ ಕ್ಯಾಂಪಸ್​ನಲ್ಲಿರುವ ಆ ಶಾಲೆಯ ಬಗ್ಗೆ ಅಷ್ಟಾಗಿ ಗಮನ ನೀಡಿರಲಿಲ್ಲ.ಆದರೆ ಇಂದು ಆ ಶಾಲೆಯ ನೆನಪು, ಆ ಮಕ್ಕಳ ಆಟ-ಪಾಠ ನೆನಪು ಮರಕಳಿಸುವಂತೆ ಮಾಡಿದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ