26/10/12

'ನಾ ನಿಲ್ಲುವಳಲ್ಲ' ಅಂದಿದ್ದವರ ಭೇಟಿ ಪ್ರಸಂಗ

ಆ ಲೇಖನ ಅದ್ಯಾಕೆ ಅಷ್ಟೊಂದು ಸಾರಿ ಓದಿಸಿಕೊಂಡಿತು ಅಂತ ಈಗಲೂ ಗೊತ್ತಾಗುತ್ತಿಲ್ಲ ನನಗೆ. ಈ ವರ್ಷದ ಫೆಬ್ರವರಿ ಹೊತ್ತಿಗೆ 'ಸಾಪ್ತಾಹಿಕ ಲವಲವಿಕೆ'ಯಲ್ಲಿ ಅದನ್ನು ಮೊದಲಿಗೆ ಕಂಡ ನೆನಪು. ಮೊದಲ ಓದಿಗೇ ಭಾರೀ ಇಷ್ಟವಾಗಿ ನಮ್ಮ ಪಟಾಲಂಗೂ ಓದಿಸಿ ಬೀಗಿದ್ದೆ. ಒಂಥರಾ ನಾನೇ ಬರೆದಂಥ ಭಾವ ಆ ಬರಹದುದ್ದಕ್ಕೂ ನನ್ನೊಟ್ಟಿಗೆ ಇರುತ್ತಿತ್ತು. ಬೇಸರಾದಾಗ ಓದುವ ಬರಹಗಳ ಯಾದಿಯಲ್ಲಿ ಆ ಬರಹಕ್ಕೆ ಈಗಲೂ ಮೊದಲ ರ್ಯಾಂಕ್.

                     *****

ಶ್ರೀದೇವಿ ಕಳಸದ ಅನ್ನೋ ಹೆಸರು ನನ್ನ ಕಣ್ಣಿಗೆ ಕಾಣಹತ್ತಿ ಸುಮಾರು ಐದಾರು ವರ್ಷಗಳಾಗಿರಬಹುದು. 'ಸಾಪ್ತಾಹಿಕ ಪುರವಣಿ' ಹಾಗೂ 'ಮಯೂರ'ದಲ್ಲಿ ಆ ಹೆಸರು ಆಗಾಗ ಕಾಣಸಿಗುತ್ತಲೇ ಇರುತ್ತಿತ್ತು. ಚಂದದ ಬರವಣಿಗೆ. ಆದರೆ ಕವಿತೆಗಳಿಗಿಂತ ಗದ್ಯ ಬರಹಗಳೇ ಹೆಚ್ಚು ಪದ್ಯದ ಗುಣ ಹೊಂದಿರುವಂತೆ ನನಗೆ  ತೋರುತ್ತಿತ್ತು. ನನ್ನೀ ಗ್ರಹಿಕೆಗೆ ಬಹುಮತ ಒದಗಿಸಿದ್ದು ಅವರ 'ನಾ ನಿಲ್ಲುವಳಲ್ಲ' ಬರಹ.

ನಾ ಮಾಸ್ಟರ್ ಡಿಗ್ರಿ ಮಾಡುವಾಗ ಒಂದೆರಡು ಬಾರಿ ಅವರೊಟ್ಟಿಗೆ ಮೊಬೈಲಿನಲ್ಲಿ ಮಾತಾಡಿದ್ದಿತ್ತು. ನಮ್ಮ ವಿಭಾಗದ ಪ್ರಾಯೋಗಿಕ ಪತ್ರಿಕೆಯ ವಿಶೇಷ ಸಂಚಿಕೆಗಾಗಿ  ಅವರನ್ನು ವಿಶೇಷವಾಗಿ ಮಾತನಾಡಿಸಿದ್ದೆ. ಆಗಿನ್ನೂ 'ನಾ ನಿಲ್ಲುವಳಲ್ಲ' ಅಂತ ಅವರು ಬರೆದಿರಲಿಲ್ಲ. ಹೀಗೆ ಶುರುವಾದ ಅವರ ಹೆಸರಿನ ನಂಟಿಗೆ ಪರಸ್ಪರ ನೋಟದ ರೂಪು ದಕ್ಕಿದ್ದು ಮೊನ್ನೆಯಷ್ಟೇ.


ವಿಜಯ ಕರ್ನಾಟಕಕ್ಕೆ ಕಾಲಿಟ್ಟು ನಾಲ್ಕು ದಿವಸವಾಗಿತ್ತು. ಮಧ್ಯಾಹ್ನ ಹನ್ನೆರಡು ಆಗಿರಬಹುದು. ಏನನ್ನೋ ಟೈಪಿಸುತ್ತಾ ಕೂತಿದ್ದೆ. 'ನಾಗರಾಜ್..' ಅಂತ ಹಿಂಬದಿಯಿಂದ ಬಂದ ಧನಿಗೆ ಥಟ್ಟನೆ ತಿರುಗಿ ನೋಡದಿರಲಾಗಲಿಲ್ಲ.


ವಿಜಯ ಕರ್ನಾಟಕದಲ್ಲಿ ಸಾಕಷ್ಟು ಮಂದಿಯ ಹೆಸರು ಬರಹಗಳ ಮೂಲಕ  ಗೊತ್ತುಂಟು. ಮುಖ ಪರಿಚಯ ಹೊಂದಿದ್ದವರು ತುಂಬಾನೇ ಕಡಿಮೆ. ಆದರೆ ಈ ಧನಿಯಲ್ಲಿದ್ದ ಪರಿಚಿತ ಭಾವಕ್ಕೆ ಬೆರಗಾಗಿ ಥಟ್ಟನೆ ತಿರುಗಿ ನೋಡಿದ್ದೆ. ಪಕ್ಕದಲ್ಲಿ ಬಂದು ನಿಂತ ಆ ಧ್ವನಿಯ ಒಡತಿ 'ನಾನು ಶ್ರೀದೇವಿ...ಬಂದು ಪರಿಚಯ ಮಾಡಿಕೊಳ್ಳೋದಲ್ವಾ...' ಅಂದ್ರು ನಗುತ್ತಾ. ಅನಿರೀಕ್ಷಿತವಾಗಿ ನನಗಾದ ಖುಷಿಯಲ್ಲಿ ಅವರಿಗೆ ಸರಿ ಜವಾಬು ಹೇಳದಾದೆ. ಆ ಹೊತ್ತಿನಲ್ಲಿ ತಡವರಿಸುತ್ತಾ ಎಂಥ ಮಾತನಾಡಿದೆನೋ ನೆಂಪಿಲ್ಲ ನನಗೆ. ಆ ಪ್ರಸಂಗ ನೆನೆದು ತುಟಿಯಲ್ಲಿ ಸಣ್ಣಗೆ ನಗು ಬಿರಿಯುತ್ತಿದೆ ಈಗ. ಬರಹ ತಂದುಕೊಡುವ ಖುಷಿಗೆ ತುದಿಮೊದಲಿರೋಲ್ಲ ಅಲ್ವಾ?

2 ಕಾಮೆಂಟ್‌ಗಳು: