15/10/12

ಮಾತು ಸೋತ ಅವ್ವನಿಗೆ ಪ್ರೀತಿಯ ತಾಕೀತು...


ಈಗಲೂ ಬಲವಾಗಿ ನಂಬಿದ್ದೇನೆ-ನಾನು ಮೂರನೇ ತರಗತಿಯನ್ನೂ ಪಾಸಾಗದವ!

ಹೌದು..ನಿಮ್ಮೆಲ್ಲರ ಗೊತ್ತಿರುವಿಕೆಯಲ್ಲಿ, ಕುವೆಂಪು ಯೂನಿವರ್ಸಿಟಿಯ ಲೆಕ್ಕದಲ್ಲಿ ನಾನು ಸ್ನಾತಕೋತ್ತರ ಪದವೀಧರ. ಆದ್ರೆ ನಿಜಕ್ಕೂ ನಾನು ಮೂರನೇ ತರಗತಿಯನ್ನೂ ಪಾಸಾಗದವ!

ಈಗ್ಗೆ 16 ವರ್ಷಗಳ ಹಿಂದಿನ ಮಾತು…

ಬೇಸಗೆಯ ರಾತ್ರಿಗಳಲ್ಲಿ ಈಚಲು ಚಾಪೆಯ ಮೇಲೆ ಹೊರಗೆ ಮಲಗೋದು ರೂಢಿ. ಅವ್ವ, ಅಪ್ಪ, ತಮ್ಮ, (ತಂಗಿ ಇನ್ನೂ ಹುಟ್ಟರಲಿಲ್ಲ ಆಗ) ನಾನು ಅಂಗಾತ ಮಲಗಿ ನಕ್ಷತ್ರ ಎಣಿಸೋ ಕೆಲಸಕ್ಕೆ ಮುಂದಾಗ್ತಾ ಇದ್ವಿ. ಹೀಗಾಗುವಾಗ ಒಂದೊಂದು ದಿನ ಅಪ್ಪ ಯಾವುದೋ ನಕ್ಷತ್ರ ಬಿತ್ತು ಅಂತ ಥಟ್ಟನೇ ಮಂತ್ರದಂತೆ ಏನೋ ಗೊಣಗಿಬಿಡುತ್ತಿದ್ದ. ಆಗೆಲ್ಲಾ ಅವ್ವ ತನ್ನ ನೀಳ ಮುಂಗೈಯಿಂದ ಅಪ್ಪನ ತಲೆಯನ್ನು ಬೇಕೋ ಬೇಡ್ವೋ ಅನ್ನೋ ಹಾಗೆ ಮೊಟಕ್ತಾ ಇದ್ಲು. ನಾನು ಕಿಸಕ್ಕನೇ ನಕ್ಕರೆ ಅವ್ವ ಮುದ್ದು ಮಾಡ್ತಿದ್ಲು. ಪ್ರತೀ ಬೇಸಗೆಯೂ ಹೀಗೇ ಕಳೀತಾ ಇತ್ತು.

ಹೀಗೇ ಒಂದು ರಾತ್ರಿ ಅವ್ವನ ಮಡಿಚಿದ ಮೊಳಕೈನ ಮೇಲೆ ಅಂಗಾತ ತಲೆಯಿಟ್ಟು ಆಕಾಶ ನೋಡುತ್ತಿದ್ದೆ. ಯಥಾಪ್ರಕಾರ ನಕ್ಷತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಯಕ್ರಮ ನಡೀತಾ ಇತ್ತು. ಅಪ್ಪ ಇವತ್ತು ಯಾವ ನಕ್ಷತ್ರಾನೂ ಬೀಳೋ ಹಾಗಿಲ್ಲವಲ್ಲ ಅಂತಲೋ ಏನೋ ಸದ್ದಿಲ್ಲದಂತಿದ್ದ.

ಆದ್ರೆ ಅಪ್ಪನ ಬದಲು ಅವತ್ತು ಅವ್ವ ಗೊಣಗಿದ್ದಳು…
ಮೂರನೇ ಕ್ಲಾಸು ಪಾಸಾದರೆ ನನ್ ಮಗಂಗೆ ವಾಚು ಕೊಡಿಸ್ಬೇಕು ಈ ಸಾತಿ…

ಅಪ್ಪ ಖುಷಿಯಿಂದ ಹೂಂಗುಟ್ಟಿದ್ದ…

ನಕ್ಷತ್ರಗಳಿಗೆ ಕಣ್ಣಲ್ಲೇ ಬಲೆಬೀಸುತ್ತಾ, ಬಲೆಯಿಂದಲೂ ಅವು ತಪ್ಪಿಸಿಕೊಂಡಾವು ಅಂತ ತೋರ್ಬೆರಳಿನ ಗಾಳ ಹಾಕುತ್ತಿದ್ದ ನಾನು ಉಕ್ಕಿಬಂದ ಪುಳಕದಿಂದ ಅವ್ವನೆಡೆಗೆ ತಿರುಗಿದೆ. ಅವ್ವನ ಕಣ್ಣುಗಳು ಅವಳು ಹೇಳುತ್ತಿದ್ದದ್ದು ಖರೆ ಅಂತ ಅಡಿಟಿಪ್ಪಣಿ ಬರೆಯುತ್ತಿದ್ದವು.

ನಾನು ಮೂರನೇ ಕ್ಲಾಸು ಪಾಸಾದೆ.

ನಾಲ್ಕು..ಐದು..ಆರು..ಏಳು..ಎಂಟು..ಒಂಬತ್ತು..ಹತ್ತು..ಪಿಯುಸಿ..ಡಿಗ್ರಿ..ಮಾಸ್ಟರ್ ಡಿಗ್ರಿ..ರಚ್ಚೆ ಹಿಡಿದವನಂತೆ ಒಂದೇ ಸಮನೆ ಎಲ್ಲ ಪಾಸಾದೆ. ಅವ್ವ ಮಾತ್ರ ನಾ ಮೂರನೇ ತರಗತಿ ಪಾಸಾಗೋ ಮುಂಚೇನೇ ಹೊರಟುಹೋಗಿಬಿಟ್ಟಿದ್ಲು.

ಅವ್ವನ ಮಾತನ್ನು ನನ್ನೊಳಗೆ ಶಾಶ್ವತವಾಗಿ ಉಳಿಸಲೋ ಏನೋ ಗೊತ್ತಿಲ್ಲ ಕಾಕತಾಳೀಯ ಎಂಬಂತೆ ಅಪ್ಪ ಇದುವರೆಗೂ ನಂಗೆ ಒಂದು ವಾಚನ್ನೂ ತೆಗೆದುಕೊಟ್ಟಿಲ್ಲ! ಯಾರೆಂದರೆ ಯಾರೂ ನನಗೆ ವಾಚು ತೆಗೆಸಿಕೊಡುವ ಅವ್ವನ ಮಾತಿಗೆ ಅಡ್ಡಬಂದಿಲ್ಲ. ಅವಳೇ ಕೊಡಿಸಲಿ ಅನ್ನೋ ನನ್ನ ಮೊಂಡು ಹಠವೂ ನಿಂತಿಲ್ಲ.

ಕಳೆದ ವಾರ ವಿಜಯ ಕರ್ನಾಟಕ ಆಫೀಸಿಗೆ ಹೋಗಿ ವಾಪಾಸು ಬರ್ತಾ ಎರಡು ವರ್ಷಗಳ ಹಿಂದೆ ಸಖಿ ಪಾಕ್ಷಿಕದಿಂದ ಸಿಕ್ಕ ಹಣದಲ್ಲಿ ಕೊಂಡಿದ್ದ ವಾಚು ನನ್ನ ಕೈಜಾರಿ ಹೋಗಿತ್ತು. ಬರಿಗೈನಲ್ಲೇ ನೀನಾಸಂಗೆ ಹೋಗಿದ್ದೆ. ಆದ್ರೆ ಹೋಗುವಾಗ ಎದೆಯ ತುಂಬಾ ಹೊಸ ಕಲರವವಿತ್ತು. ಅತ್ತಲಿಂದ ಬಂದ ನಂತರ ಆ ಕಲರವಕ್ಕೂ ಕಾರ್ಮೋಡ ಕವಿದಿದೆ. ದಿಢಿರನೇ ಅವ್ವ ಕಾಡಹತ್ತಿದ್ದಾಳೆ. ಅವಳಿರಬೇಕಿತ್ತು ಅನ್ನಿಸುತ್ತಿದೆ. ಅವಳ ಮಡಿಲಲ್ಲಿ ಮಲಗಿ ಕಾರಣ ಹೇಳದೆಯೇ ಮನಸಾರೆ ಅತ್ತುಬಿಡಬೇಕು ಅನ್ನೋ ಹಂಬಲ ಕೊರಳ ಬಿಗಿಯುತ್ತಿದೆ.

ಅದಕ್ಕೇ ಈ ಸಾರಿ ಅವ್ವನೇ ವಾಚು ಕೊಡಿಸಲಿ ಅಂತನ್ನೋ ನಿರ್ಧಾರಕ್ಕೆ ಬಂದಿದ್ದೇನೆ. ಅವಳು ಹೇಳಿದ್ದು ನಾ ಮೂರನೇ ತರಗತಿ ಪಾಸಾದರೆ ವಾಚು ಕೊಡಿಸುತ್ತೇನೆ ಅಂತ. ಇಲ್ಲಿಯವರೆಗೂ ವಾಚು ಕೊಡಿಸಿಲ್ಲ ಅಂದ್ರೆ ಏನರ್ಥ…ನೀವೇ ಹೇಳಿ…?



1 ಕಾಮೆಂಟ್‌:

  1. ಮನಸ್ಸಿನಾಗಿನಾ ಕನಸನ್ನು ಹಾಗೆ ಇಟ್ಟುಕೊಂಡಿದಿಯಾ ಅಣ್ಣಾ, ಅಮ್ಮನ ಕನಸು ಮಾಡುವ ಗಳಿಗೆ ಸದ್ಯದಲ್ಲೇ ಬರುತ್ತೆ ಬಿಡು,

    ಪ್ರತ್ಯುತ್ತರಅಳಿಸಿ