6/9/12

ಒಡೆದ ಬಿಂದಿಗೆ ನಕ್ಕಿದ್ದು..


ಅಪ್ಪ ಬೆವರು ಸುರಿಸಿ ತಂದಿದ್ದ ಬಿಂದಿಗೆಗಳವು. ಅಂದು ಬೆಳಿಗ್ಗೆ ನೀರು ತರ್ಲಿಕ್ಕೆ ನಲ್ಲಿ ಬಳಿ ಹೋದ ಅವ್ವ ಒಂದನ್ನು ತಲೆಯ ಮೇಲಿರಿಸಿದವಳು, ಎರಡನೇ ಬಿಂದಿಗೆಯನ್ನು ಎಡಗೈಯಿಂದ ಎತ್ತಿ ಇನ್ನೇನು ಸೊಂಟದ ಮೇಲಿಟ್ಟುಕೊಳ್ಬೇಕು...ನಾನು ಅದುವರೆಗೂ ಕೇಳಿರದಿದ್ದ ಸಣ್ಣದೊಂದು ಸದ್ದು! ಅವ್ವ ಆಗಬಾರದ್ದೇನೋ ಆಗಿಹೋಯ್ತಲ್ಲ ಅನ್ನುವಂತೆ ಒಡೆದ ಬಿಂದಿಗೆಯತ್ತಲೇ ನೋಡುತ್ತಿದ್ದಳು.

ನನಗೂ ದಿಗಿಲಾಯ್ತು.ಇವತ್ತು ಮನೆಯಲ್ಲಿ ಅಪ್ಪನ ಬೈಗುಳ ಕೇಳಬೇಕಾದೀತು ಅಂತಲೇ ಒಲ್ಲದ ಮನಸ್ಸಿನಿಂದ ಅಪರೂಪಕ್ಕೆ ಅವ್ವನ ಸೆರಗು ಬಿಟ್ಟು ಆಡಲಿಕ್ಕೆ ಹೊಂಟೆ. ಸಂಜೆ ಮನೆಗೆ ಬರುವಷ್ಟರಲ್ಲಿ ಗಾರೆ ಕೆಲಸಕ್ಕೆ ಪಕ್ಕದೂರಿಗೆ ಹೋಗಿದ್ದ ಅಪ್ಪ ಬಂದಾಗಿತ್ತು. ಜೊತೆಗೆ ಪುಟ್ಟ ಗುಡಿಸಲಿನಂತಿದ್ದ ನಮ್ ಮನೆಯೊಳಗಿನಿಂದ ನಗುವಿನ ಜುಗಲ್'ಬಂಧಿ!

ಹಿಂಬದಿಯ ಸೂರಿನಿಂದ ಇಣುಕಿ ನೋಡಿದೆ. ಒಲೆಯ ಮುಂದೆ ಕೊಳಪೆ ಹಿಡಿದು ಕುಂತಿದ್ದ ಅವ್ವನನ್ನು ಅಪ್ಪ ಹಿಂದಿನಿಂದ ಬಸಿ ಹಿಡಿದಿದ್ದ. ಅವ್ವ ನಗುತ್ತಲೇ ಏನೋ ಗೊಣಗುತ್ತಿದ್ದಳು. ಅನತಿ ದೂರದಲ್ಲಿ ಒಡೆದ ಬಿಂದಿಗೆ ಸದ್ದೇ ಮಾಡದೆ ಹಲ್ಲುಕಿರೀತಾ ಕುಂತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ