6/9/12

ಮುತ್ತಿನ ಹುಡುಗಿ


ಯೂನಿವರ್ಸಿಟಿಯ ಬೀದಿಗಳೆಲ್ಲಾ ಅಲ್ಲೊಂದು ಇಲ್ಲೊಂದು ಎಲೆ ಉಳಿದ ಬೇಸಗೆಯ ಮರಗಳಂತಾಗಿದ್ದವು. ಊರಿಗೆ ಹೋಗಿದ್ದ ನಾನು ರಜಾದಿನಗಳು ಮುಗಿಯುವ ಮುನ್ನವೇ ವಿವಿಗೆ ಬರುತ್ತಿದ್ದ ದಿನವದು. ಎದುರಿನಿಂದ ಯಾರೋ ಹೆಂಗಸು ತನ್ನ ಪುಟಾಣಿ ಮಗುವನ್ನು ಕೈ ಹಿಡಿದು ನಡೆಸುತ್ತಾ ಮೊಬೈಲ್'ನಲ್ಲಿ ಮಾತನಾಡುತ್ತಾ ಇತ್ತ ಬರುತ್ತಿದ್ದರು. ಅವರು ಹತ್ತಿರಾಗುತ್ತಿದ್ದಾರೆ ಅನ್ನೋ ವೇಳೆಗೆ ಅವರ ಹಿಂಬದಿಯಿಂದ ಹುಡುಗಿಯೊಬ್ಬಳು ಕಾಣಿಸಿದಳು. ಸುಂದರವಾಗಿ ಕ್ರಾಪು ತೆಗೆದು ಬಾಚಿದ ಕಡುಗಪ್ಪು ಕೂದಲಿನ ದ್ದ ಜಡೆಯನ್ನು ಎಡಬದಿಯಿಂದ ಮುಂದಕ್ಕೆ ಇಳಿಬಿಟ್ಟಿದ್ದ ಲವಲವಿಕೆಯ ಮುಖ ಇನ್ನೂ ಚೆನ್ನಾಗಿ ನೆಂಪಿದೆ.

ಆಕೆಗೂ ನನಗೂ ನಡುವಿನ ಅಂತರ ಸುಮಾರು ಹತ್ತು ಅಡಿ ಇದ್ದೀತು. ಆಕೆ ಆ ಪುಟ್ಟ ಮಗುವಿನತ್ತ ತಿರುಗಿ ಸ್ವಲ್ಪ ಬಾಗಿ ಬಲಗೈನಲ್ಲಿ ಮೆತ್ತಗೆ ಕೆನ್ನೆ ಚಿವುಟಿ ಇತ್ತ ತಿರುಗುತ್ತಲೇ ನೆಟ್ಟಗೆ ನಿಂತು ಆ ಕೈಗೆ ಇನ್ನೇನು ಮುತ್ತು ಕೊಟ್ಟುಕೊಂಡಳು ಅನ್ನುವಷ್ಟರಲ್ಲಿ ನಾನು ಆಕೆಯ ಸರಿ ಎದುರಿದ್ದೆ! ಇಷ್ಟಾಗುವುದರೊಳಗೆ ನಮ್ಮಿಬ್ಬರ ನಡುವಿದ್ದ ಅಂತರ ಸುಮಾರು ಮೂರು ಅಡಿಗಳಷ್ಟೆ.

ದೂರದಿಂದ ಆಕೆಯ ನೀಳ ಜಡೆಯನ್ನು ನೋಡಿ ಮನದಲ್ಲಿ ಏನನ್ನೋ ಧ್ಯಾನಿಸುತ್ತಾ ಹೋಗುತ್ತಿದ್ದ ನನಗೆ ಆ ಸಾಮೀಪ್ಯತೆ ಥಟ್ಟನೆ ದಿಗಿಲಾಗುವಂತೆ ಮಾಡಿತ್ತು. ಆಕೆ ನನಗೇ ಮುತ್ತು ಕೊಟ್ಟಳೇನೋ ಅನ್ನುವಂತೆ ಎದೆಬಡಿತ ಜೋರಾಗಿತ್ತು. ಕೆಂಪೇರಿದ ಮುಖ ಹೊತ್ತ ಅವಳು ನಸುನಗುತ್ತಾ ಬದಿಗೆ ಸರಿದು ಹಾವಿನಂತೆ ಸರಸರ ನಡೆದುಬಿಟ್ಟಳು. ನಾನು ನಿಂತಲ್ಲಿಯೇ ನಿಂತಿದ್ದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ