ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಕಲಾಪ್ರತಿಭೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ. "ನನ್ನ ಮೆಚ್ಚಿನ ಸಾಹಿತಿ" ಭಾಷಣದಲ್ಲಿ ದ್ವಿತೀಯ ಬಹುಮಾನವಿತ್ತು ನನಗೆ. ತೇಜಸ್ವಿ ಬಗೆಗೆ ಮನಸಾರೆ ಚಂದ ಮಾತಾಡಿದ್ದೆ ಅವತ್ತು.ಸಮಾರಂಭ ಮುಗೀತು. ಅತ್ತ ಹೋಗಿ ಕನ್ನಡ ಭವನದ ಮೆಟ್ಟಿಲ ಮೇಲೆ ಮಂಕು ಕವಿದವನಂತೆ ಸಂಜೆಬಾನ ದಿಟ್ಟಿಸುತ್ತಾ ಕುಂತಿದ್ದೆ. ಅದ್ಯಾಕೋ ಅವತ್ತೊಂದು ದಿನ ಮಾತ್ರ ಅಷ್ಟೊಂದು ಗದ್ದಲದೊಳಗಿದ್ದರೂ ನಾನು ಬೆಂಗಳೂರಿನಲ್ಲಿದ್ದೇನೆ ಅನ್ನೋದೇ ಮರೆತುಹೋಗಿತ್ತು. ಸುಗಮ ಸಂಗೀತದಲ್ಲಿ ಪ್ರಶಸ್ತಿ ಗೆದ್ದಿದ್ದ ಶಿವಮೊಗ್ಗದ ಆ ಉದ್ದ ಜಡೆಯ ಹುಡುಗಿ ನನ್ನೆದುರು ಸ್ವಲ್ಪ ದೂರದಲ್ಲೇ ಹಾದುಹೋದರೂ ಅವಳೆಡೆಗೆ ಕಣ್ಣುಗಳು ಚಲಿಸಿದವೇ ಹೊರತು ಮನ ಕದಲಲಿಲ್ಲ. ನನ್ನ ಪಕ್ಕ ಭಾಷಣದಲ್ಲಿ ತೃತೀಯ ಬಹುಮಾನ ಪಡೆದ ಹಂಪಿ ವಿವಿಯ ಹಿರಿಯ ವಿದ್ಯಾರ್ಥಿಯೊಬ್ಬ ಆನಂದತುಂದಿಲನಾಗಿ ಎಲ್ಲರಿಗೂ ಫೋನಾಯಿಸುತ್ತಲಿದ್ದ. ನನ್ನ ಮೌನದಿಂದ ದಂಗಾದ ಆತ ಕೇಳಿದ್ದ, 'ನಾನೇ ಎಲ್ರಿಗೂ ಫೋನಚ್ಚಿ ಹೇಳ್ತಿದ್ದೀನಿ, ನೀವ್ಯಾಕ್ರಿ ಹಿಂಗ್ ಕುಂತೀರಿ....?'. ಅಚ್ಚರಿಯಿತ್ತು ಅವನ ದನಿಯಲ್ಲಿ.
ಅದೆಲ್ಲಿತ್ತೋ ದಟ್ಟ ವಿಷಾದದ ನಗುವೊಂದು ಮಿಂಚಿನಂತೆ ಸುಳಿದುಹೋಯ್ತು. ನನಗೆ ಈ ವಿಷಯವನ್ನು ತೇಜಸ್ವಿಯವರ ಹೊರತು ಬೇರಾರಿಗೂ ಮೊದಲು ಹೇಳಬೇಕೆನಿಸಿರಲಿಲ್ಲ. ಆದರೆ ಆ ಹೊತ್ತಿಗೆ ತೇಜಸ್ವಿ ಇರಲಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ